ನಾಳೆಯಿಂದ ವಿವಿಧ ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಲಸಿಕಾಕರಣ ಆರಂಭ
ಧಾರವಾಡ
ಸರಕಾರದ ಆದೇಶದಂತೆ ಜಿಲ್ಲೆಯ 15 ರಿಂದ 18 ವರ್ಷ ವಯೋಮಾನದ ಮಕ್ಕಳಿಗೆ ಲಸಿಕೆ ನೀಡುವ ಅಭಿಯಾನಕ್ಕೆ ಅಗತ್ಯ ಸಿದಗದತೆ ಮಾಡಿಕೊಳ್ಳಲಾಗಿದ್ದು, ಜಿಲ್ಲೆಯಲ್ಲಿ ಸುಮಾರು 25 ಸಾವಿರ ಕೊವ್ಯಾಕ್ಸಿನ್ ಲಸಿಕೆ ದಾಸ್ತಾನು ಇದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, 15 ರಿಂದ 18 ವರ್ಷ ವಯಸ್ಸಿನ ಜಿಲ್ಲೆಯ ಸುಮಾರು 95,774 ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ.
ಮಕ್ಕಳ ಲಸಿಕಾಕರಣ ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ನಾಳೆ (ಜ.3) ಮಧ್ಯಾಹ್ನ 12 ಗಂಟೆಗೆ ಹೆಬಸೂರ ಗ್ರಾಮದ ಸರಕಾರಿ ಪ್ರೌಡಶಾಲೆಯಲ್ಲಿ ಚಾಲನೆ ನೀಡಲಿದ್ದಾರೆ.
ಮತ್ತು ತಾವು ಸಹ ಬೆಳಿಗ್ಗೆ 10 ಗಂಟೆಗೆ ವಿದ್ಯಾಗಿರಿಯ
ಜೆ.ಎಸ್. ಎಸ್. ಪಿಯು ಕಾಲೇಜಿಗೆ ಭೇಟಿ ನೀಡಿ, ಲಸಿಕಾರಣ ಅಭಿಯಾನದ ಕುರಿತು ಪರಿಶೀಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ನಾಳೆ ಬೆಳಿಗ್ಗೆ 10 ಗಂಟೆಯಿಂದ ಜಿಲ್ಲೆಯಲ್ಲಿ ಮಕ್ಕಳಿಗೆ ಲಸಿಕಾಕರಣ ಅಭಿಯಾನ ಆರಂಭವಾಗಲಿದ್ದು, ನಾಳೆಗೆ ಸುಮಾರು 80 ವಿವಿಧ ಶಾಲೆ, ಕಾಲೇಜುಗಳಲ್ಲಿ 131 ಸೆಷನ್ ನಡೆಸಲಾಗುತ್ತಿದೆ. 600 ಕ್ಕೂ ಹೆಚ್ಚು ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರನ್ನು ಲಸಿಕಾರಣಕ್ಜೆ ನೇಮಿಸಲಾಗಿದ್ದು, ಅಗತ್ಯವಿರುವ ಕೊವ್ಯಾಕ್ಸಿನ್ ಲಸಿಕೆಯನ್ನು ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಲಸಿಕಾರಣವು ಪ್ರತಿದಿನ ಶಾಲಾ ಕಾಲೇಜು ಅವಧಿಯಲ್ಲಿ ನಡೆಸಲಾಗುತ್ತಿದ್ದು, ನಿಗದಿತ ಮಕ್ಕಳ ಸಂಖ್ಯೆಯ ಗುರಿ ಪೂರ್ಣಗೊಳ್ಳವವರೆಗೆ ಲಸಿಕಾಕರಣ ಮುಂದುವರಿಸಲಾಗುವುದು.
ಮಕ್ಕಳಿಗೆ ಲಸಿಕೆ ನೀಡುತ್ತಿರುವ ಕುರಿತು ಪಾಲಕರ ಒಪ್ಪಿಗೆ ಪಡೆಯಲಾಗಿದ್ದು, ಆಯಾ ಶಾಲಾ ಮುಖ್ಯಸ್ಥರು ಹಾಗೂ ತಾಲೂಕಾ ವೈದ್ಯಾಧಿಕಾರಿಗಳು ಪರಸ್ಪರ ಸಮನ್ವಯ ಸಾಧಿಸಿ, ಶಾಲೆಗಳಲ್ಲಿ ಲಸಿಕಾರಣ ಮಾಡುವ ದಿನಾಂಕವನ್ನು ಮಕ್ಕಳಿಗೆ ಹಾಗೂ ಪಾಲಕರಿಗೆ ಮುಂಚಿತವಾಗಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿರುವ 15 ರಿಂದ 18 ವರ್ಷ ವಯೋಮಾನದ ಎಲ್ಲ ಮಕ್ಕಳು ತಪ್ಪದೇ ಕೊವ್ಯಾಕ್ಸಿನ್ ಲಸಿಕೆ ಪಡೆಯಲು ಎಲ್ಲ ಪಾಲಕರು, ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿಗಳು ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.