ಆರೆಸ್ಸೆಸ್‌ಗೆ ನಿರ್ಬಂಧ ಹೇರಿದ್ದ ರಾಜ್ಯಸರ್ಕಾರಕ್ಕೆಹೈಕೋರ್ಟ್ ಚಾಟಿ!

POWER CITYNEWS:NEW DEHLI/ಆರೆಸ್ಸೆಸ್ (RSS) ಗುರಿಯಾಗಿಸಿಕೊಂಡು ಸಾರ್ವಜನಿಕ ಸ್ಥಳಗಳಲ್ಲಿ ಪಥ ಸಂಚಲನ, ಸಭೆ-ಸಮಾವೇಶಗಳಿಗೆ ನಿರ್ಬಂಧ ಹೇರಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರದ (State Congress Government) ಆದೇಶಕ್ಕೆ ಧಾರವಾಡ ಹೈಕೋರ್ಟ್ ಪೀಠ ತಾತ್ಕಾಲಿಕ ತಡೆ ನೀಡಿ, ನೀತಿಪಾಠ ಹೇಳಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಚಾಟಿ ಬೀಸಿದ್ದಾರೆ. ನವದೆಹಲಿಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಸರ್ಕಾರದ ಜಾಗ, ಆವರಣಗಳಲ್ಲಿ ಕಾರ್ಯಕ್ರಮ ನಡೆಸಲು ಖಾಸಗಿ ಸಂಸ್ಥೆಗಳು ಪೂರ್ವಾನುಮತಿ ಪಡೆಯಬೇಕೆಂದು ಹೊರಡಿಸಿದ ಆದೇಶಕ್ಕೆ ಧಾರವಾಡ ಹೈಕೋರ್ಟ್ ಪೀಠ ತಾತ್ಕಾಲಿಕ ತಡೆ ನೀಡಿದೆ. ಇದು ಸಂವಿಧಾನದ ಮೌಲ್ಯಕ್ಕೆ ಸಿಕ್ಕ ಜಯವಾಗಿದೆ ಎಂದು ಹೇಳಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಪೂರ್ವಾಗ್ರಹಪೀಡಿತವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಗುರಿಯಾಗಿಸಿಕೊಂಡು ಸರ್ಕಾರದ ಆಸ್ತಿ ನೆಪದಲ್ಲಿ ರಸ್ತೆ, ಉದ್ಯಾನವನ ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಸರ್ಕಾರೇತರ ಚಟುವಟಿಕೆಗಳಿಗೆ ನಿರ್ಬಂಧ ಹೇರಿರುವುದು ಸಂವಿಧಾನ ವಿರೋಧಿ ಕ್ರಮವಾಗಿದೆ ಎಂದು ಜೋಶಿ ಖಂಡಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಸಂವಿಧಾನದ ಮೂಲ ಆಶಯಗಳ ವಿರೋಧವಾಗಿ ನಡೆಯುತ್ತಿದೆ ಎಂಬುದಕ್ಕೆ ಹೈಕೋರ್ಟ್ ಪೀಠ ನೀಡಿದ ಈ ಮಹತ್ವದ ತೀರ್ಪೇ ಸಾಕ್ಷಿ ಎಂದ ಸಚಿವರು, ಸಂವಿಧಾನ ವಿರೋಧಿ ಕ್ರಮಗಳನ್ನು ಅನುಸರಿಸುವ ಸರ್ಕಾರಕ್ಕೆ ನ್ಯಾಯಾಲಯದ ಈ ತೀರ್ಪು ಎಚ್ಚರಿಕೆಯ ಗಂಟೆಯಾಗಿದೆ. ಈ ಸರ್ಕಾರ ಇನ್ನಾದರೂ ಸಂವಿಧಾನದ ಮೂಲ ಆಶಯ ಗೌರವಿಸುವ ಕಾರ್ಯವನ್ನು ಪಾಲಿಸಲಿ ಸಲಹೆ ನೀಡಿದರು.


