
POWER CITY NEWS:BIDARಬೀದರ್:ತನ್ನ ಸಹೋದರಿಯೊಂದಿಗೆ ಅಕ್ರಮ ಸಂಭಂದ ಹೊಂದಿದ್ದಾನೆಂದು ಶಂಕಿಸಿ ವ್ಯಕ್ತಿ ಹಾಗೂ ಆತನ ಪತ್ನಿಯನ್ನು ಬರ್ಬರವಾಗಿ ಹತ್ಯೆ (Murder Case) ಮಾಡಿರುವುದು ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಕೊಹಿನೂರು ಪಹಾಡ ಗ್ರಾಮದ ಬಳಿ ಮಂಗಳವಾರ ನಡೆದಿದೆ.
ತಾಲೂಕಿನ ಜಾಫರವಾಡಿ ನಿವಾಸಿಗಳಾದ ರಾಜು ಕಾಂತಪ್ಪ ಕೊಳಸೂರೆ (28) ಹಾಗೂ ಈತನ ಪತ್ನಿ ಶಾರದಾ (24) ಕೊಲೆಯಾದ ದುರ್ದೈವ ದಂಪತಿಗಳು. ತಾಲೂಕಿನ ಯರಂಡಗಿ ಗ್ರಾಮದ ದತ್ತಾತ್ರೇಯ ವಾಲೆ ಹಾಗೂ ತುಕಾರಾಮ ಚಿಟಂಪಲ್ಲೆ ಎಂಬುವವರೆ ಕೊಲೆ ಆರೋಪಿಗಳು ಎನ್ನಲಾಗಿದೆ.
ಹತ್ಯೆಗಿಡಾದ ರಾಜು ಆರೋಪಿತ ದತ್ತಾತ್ರೇಯನ ಸಹೋದರಿಯ ಜತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎನ್ನುವ ಸಂಶಯದ ಮೇಲೆ ಕೃತ್ಯ ನಡೆದಿದೆ ಎಂದು ತಿಳಿದುಬಂದಿದೆ.
ಪತ್ನಿಯೊಂದಿಗೆ ಮುಂಬೈಗೆ ತೆರಳಿದ್ದ ರಾಜುನನ್ನು ಕೊಲೆ ಮಾಡಲು ಸಂಚು ರೂಪಿಸಿದ ಆರೋಪಿಗಳು, ಯುವತಿ ಕಡೆಯಿಂದ ಮೊಬೈಲ್ ಕರೆ ಮಾಡಿಸಿ ಆತನನ್ನು ಕರೆಸಿಕೊಂಡಿದ್ದಾರೆ. ಬಳಿಕ ದಂಪತಿಯನ್ನು ಕೊಹಿನೂರು ಪಹಾಡ ಬಳಿ ಮಾರ್ಗದ ಮಧ್ಯೆ ಮಾತನಾಡುವ ನೆಪದಲ್ಲಿ ಗ್ರಾಮದ ಹೊರವಲಯಕ್ಕೆ ಕರೆದುಕೊಂಡು ಹೋಗಿ ಮಚ್ಚಿನಿಂದ ಕತ್ತು ಸೀಳಿ ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ಇಬ್ಬರು ಯುವಕರು ಹಾಗೂ ಆರೋಪಿಯ ಸಹೋದರಿ ಸೇರಿ ಮೂವರ ವಿರುದ್ದ ಪ್ರಕರಣ ದಾಖಲಾಗಿದೆ.
ಕೊಲೆಯಾದ ದಂಪತಿಗೆ ಮೂರು ವರ್ಷದ ಪುಟ್ಟ ಮಗುವಿದೆ. ಏನೂ ಅರಿಯದ ಮಗುವಿನ ಮುಂದೆಯೇ ಪಾಲಕರನ್ನು ಕೊಲೆ ಮಾಡಲಾಗಿದೆ. ತಂದೆ, ತಾಯಿಯನ್ನು ಕಳೆದುಕೊಂಡ ಮಗು ಕೊಲೆಯಾದ ಸ್ಥಳದಲ್ಲಿ ಅನಾಥವಾಗಿ ಕುಳಿತಿದ್ದ ದೃಶ್ಯ ನೋಡುಗರ ಮನಕಲಕುವಂತಿತ್ತು.
ಘಟನಾ ಸ್ಥಳಕ್ಕೆ ಎಸ್ಪಿ ಪ್ರದೀಪ್ ಗುಂಟಿ, ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡರ್, ಸಿಪಿಐ ಕೃಷ್ಣಕುಮಾರ ಪಾಟೀಲ್, ಪಿಎಸ್ಐ ಸುವರ್ಣ ಮಲಶೆಟ್ಟಿ ಇತರರು ಭೇಟಿ ನೀಡಿ ಪರಿಶೀಲಿಸಿ ಕೊಲೆ ಮಾಡಿದ ಇಬ್ಬರು ಯುವಕರು ಹಾಗೂ ಆರೋಪಿಯ ಸಹೋದರಿ ಸೇರಿ ಮೂವರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.