ಧಾರವಾಡ

ಫ್ಯಾಷನ್ ಶೋ ನಡಿಗೆ ಮತದಾನದ ಕಡೆಗೆ

ಧಾರವಾಡ

ಬುಲೆಟ್‌ಗಿಂತ ಬ್ಯಾಲೆಟ್ ಗಟ್ಟಿ, ಮತದಾನ ನಮ್ಮ ಹಕ್ಕು, 18 ವರ್ಷ ತುಂಬಿದ ಯುವಜನರು ಮತದಾರರ ಪಟ್ಟಿಗೆ ಹೆಸರು ಸೇರಿಸಿಕೊಳ್ಳಿ ಎಂಬ ಹಲವು ಘೋಷಣೆಗಳನ್ನು ಸಾರುವ ಫಲಕಗಳನ್ನು ಹಿಡಿದು ಭಾರತದ ವಿವಿಧ ಸಂಸ್ಕೃತಿ,ಭಾಷೆ,ಆಚರಣೆಗಳ ವೈವಿಧ್ಯತೆ ಸಾರುವ ಆಕರ್ಷಕ ವಿನ್ಯಾಸದ ಉಡುಪುಗಳೊಂದಿಗೆ ರ್ಯಾಂಪ್ ಮೇಲೆ ಮಾರ್ಜಾಲ ನಡಿಗೆ ಹಾಕಿದ ಯುವತಿಯರು ಮತದಾನ ಜಾಗೃತಿಯ ಸಂದೇಶ ಸಾರಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,ಕಾಲೇಜು ಶಿಕ್ಷಣ ಇಲಾಖೆ ಹಾಗೂ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಆಲೂರು ವೆಂಕಟರಾವ್ ಸಭಾಭವನದಲ್ಲಿ ಇಂದು ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಫ್ಯಾಷನ್ ಷೋ ಹಾಗೂ ವಿವಿಧ ಸ್ಪರ್ಧೆಗಳು ಜರುಗಿದವು.

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಫ್ಯಾಷನ್ ಟೆಕ್ನಾಲಜಿ ವಿಭಾಗದ ಉಪನ್ಯಾಸಕರಾದ ಡಾ.ನಮ್ರತಾ ಎ., ಡಾ. ಲಕ್ಷ್ಮೀ ಅವರ ಮಾರ್ಗದರ್ಶನದಲ್ಲಿ ಸುಮಾರು 20 ವಿದ್ಯಾರ್ಥಿನಿಯರು ಸಾಂಪ್ರದಾಯಿಕ, ಪಾಶ್ಚಾತ್ಯ ಮತ್ತು ವಿಭಿನ್ನ ಸಂಸ್ಕೃತಿಯ ವೇಷಭೂಷಣಗಳೊಂದಿಗೆ ಮತದಾರರ ಜಾಗೃತಿಗಾಗಿ ಫ್ಯಾಷನ್ ಷೋ ನಡೆಸಿದರು.

ರಾಜಸ್ಥಾನಿ, ಗುಜರಾತಿ, ಮರಾಠಿ, ಲಂಬಾಣಿ, ಕಥಕ್, ಮಾರವಾಡಿ ಹೀಗೆ ವಿವಿಧ ವಿನ್ಯಾಸಗಳ ಆಕರ್ಷಕ ಉಡುಗೆ ತೊಟ್ಟು ಶಿಸ್ತಿನ ಹೆಜ್ಜೆಗಳ ಫ್ಯಾಷನ್ ಷೋ ನಡೆಸಿ, ಸಭಾಂಗಣದಲ್ಲಿ ಹರ್ಷೋದ್ಗಾರಗಳಿಗೆ ಕಾರಣವಾದರು.

ಮತದಾನ ಮಾಡಿ ಪ್ರಜಾಪ್ರಭುತ್ವ ಕಾಪಾಡಿ,18 ವರ್ಷ ತುಂಬಿದವರು ಮತದಾರ ಪಟ್ಟಿಗೆ ಸೇರ್ಪಡೆಯಾಗಿ, ಬ್ಯಾಲೆಟ್ ಪತ್ರ ಬುಲೆಟ್ಟಿಗಿಂತ ಗಟ್ಟಿ ಎಂಬ ಕೈಫಲಕಗಳನ್ನು ಹಿಡಿದು ವಿದ್ಯಾರ್ಥಿಗಳಲ್ಲಿ ಮತದಾನ ಜಾಗೃತಿ ಮೂಡಿಸಿದರು.

ಕಾಲೇಜು ಉಪನ್ಯಾಸಕರು,ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button