ಸ್ಥಳೀಯ ಸುದ್ದಿ

ಅಭಿವೃದ್ಧಿಗೆ ನನ್ನ ಆದ್ಯತೆ; ಇಸ್ಪೆಟ್ ಕ್ಲಬ್, ಅನಧಿಕೃತ ಸಾರಾಯಿ ಮಾರಾಟ ನಿಲ್ಲಿಸಲು ಕ್ರಮ ; ಪ್ರಾಮಾಣಿಕವಾಗಿರುವ ಅಧಿಕಾರಿಗಳಿಗೆ ಭಯಬೇಡ : ಶಾಸಕ ವಿನಯ ಕುಲಕರ್ಣಿ

ಕಿತ್ತೂರು

ಧಾರವಾಡ ಗ್ರಾಮೀಣಭಾಗದ ಅನೇಕ ಹಳ್ಳಿಗಳಲ್ಲಿ ಅನಧಿಕೃತವಾಗಿ ಇಸ್ಪೆಟ್ ಅಡ್ಡೆ, ಮನೆಗಳಲ್ಲಿ ಸಾರಾಯಿ ಮಾರಾಟ ಮಾಡುತ್ತಿರುವ ಕುರಿತು ಗ್ರಾಮಸ್ಥರಿಂದ ವಿಶೇಷವಾಗಿ ಮಹಿಳೆಯರಿಂದ ದೂರುಗಳು ಬಂದಿದ್ದು, ಪೆÇಲೀಸ್ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ಇಂದಿನಿಂದಲೇ ಕಾರ್ಯಚರಣಿ ಕೈಗೊಂಡು ಅಕ್ರಮಗಳನ್ನು ತಕ್ಷಣದಿಂದ ನಿಲ್ಲಿಸಲು ಕ್ರಮ ವಹಿಸಬೇಕೆಂದು ಶಾಸಕ ವಿನಯ ಕುಲಕರ್ಣಿ ಅವರು ಅಧಿಕಾರಿಗಳಿಗೆ ನಿರ್ದೇಶಿಸಿದರು.

ಅವರು ಇಂದು ಬೆಳಿಗ್ಗೆ ಸಮೀಪದ ಕಿತ್ತೂರು ಪಟ್ಟಣದ ಡೊಂಬರಕೊಪ್ಪ ಐ.ಬಿ.ಯಲ್ಲಿ ಧಾರವಾಡ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿನ ವಿವಿಧ ಇಲಾಖೆಗಳ ಕಾಮಗಾರಿ ಹಾಗೂ ಯೋಜನೆಗಳ ಕುರಿತು ಪ್ರಗತಿ ಪರಿಶೀಲನಾ ಸಭೆ ಜರುಗಿಸಿ ಮಾತನಾಡಿದರು.

ಹಳ್ಳಿಗಳಲ್ಲಿ ಇಸ್ಪೆಟ್ ದಂದೆ, ಸಾರಾಯಿ ಮಾರಾಟದಿಂದ ಕುಟುಂಬಗಳು ಹಾಳಾಗುತ್ತಿವೆ. ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳಬೇಕು. ಯಾವ ಪ್ರಭಾವಿ, ಜನಪ್ರತಿನಿಧಿ ಹೆಸರು ಹೇಳಿದರೂ ಸಹ ಮುಲಾಜಿಲ್ಲದೆ ಅವರ ವಿರುದ್ಧ ಪ್ರಕರಣ ದಾಖಲಿಸಿ, ಸೂಕ್ತ ಕ್ರಮ ಜರುಗಿಸಿ ಎಂದು ಶಾಸಕರು ತಿಳಿಸಿದರು.

ನನ್ನ ಮತ ಕ್ಷೇತ್ರದ ಅಭಿವೃದ್ಧಿಗೆ ನನ್ನ ಆದ್ಯತೆ. ನಿಯಮಾನಸಾರ ಕಾಮಗಾರಿ ಕೈಗೊಂಡ ಮತ್ತು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಭಯ ಪಡಬೇಕಿಲ್ಲ ; ಯಾವುದೋ ಒತ್ತಡ ಒತ್ತಾಯಕ್ಕೆ ಒಳಗಾಗಿ ಕೆಲಸ ಮಾಡಿದ್ದರೆ ತಿದ್ದಿಕೊಳ್ಳಲು ಅವಕಾಶ ನೀಡುತ್ತೇನೆ. ಆದರೆ ಅದು ಹಳ್ಳಿಗಳ ಅಭಿವೃದ್ಧಿಗೆ, ಜನಸಾಮಾನ್ಯರ ಕಲ್ಯಾಣಕ್ಕೆ ಪೂರಕವಾಗಿರಬೇಕು. ಸರಕಾರಿ ನಿಯಮ ಮೀರಿ ಯಾರು ವರ್ತಿಸಬಾರದು ಎಂದು ಶಾಸಕರು ಎಚ್ಚರಿಸಿದರು.

ಸರ್ಕಾರ ಈಗಾಗಲೇ ಕಾಮಗಾರಿಗಳ ಸ್ಥಗಿತಕ್ಕೆ ಮತ್ತು ಹೊಸ ಕಾಮಗಾರಿ ಆರಂಭಿಸದಂತೆ ಸೂಚನೆ ನೀಡಿದೆ. ಅದರ ಅನ್ವಯ ಯಾವ ಇಲಾಖೆ ಅಧಿಕಾರಿಗಳು ಹಳೇ ಕಾಮಗಾರಿ ಪುನರಾರಂಭ, ಹೊಸ ಕಾಮಗಾರಿಗೆ ಚಾಲನೆ ನೀಡಬಾರದು ಎಂದು ಎಲ್ಲಾ ಇಲಾಖೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಪ್ರಾಸ್ತಾವಿಕ ಮಾತನಾಡಿ, ಅಧಿಕಾರಿಗಳನ್ನು ಪರಿಚಯಿಸಿದರು. ವಿವಿಧ ಇಲಾಖೆಯ ಕಾಮಗಾರಿಗಳಿಗೆ ಬಿಡುಗಡೆ ಆದ ಅನುದಾನ ಮತ್ತು ಕಾಮಗಾರಿಗಳ ಪ್ರಗತಿ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದರು. ಕಂದಾಯ ಇಲಾಖೆಯ ಯೋಜನೆಗಳ ಕುರಿತು ಶಾಸಕರಿಗೆ ವಿವರಿಸಿದರು.

ಅಧಿಕಾರಿಗಳಿಂದ ತನಿಖೆ : ಧಾರವಾಡ ಗ್ರಾಮೀಣ ಭಾಗದ ಕೆಲವು ಕಡೆ ನಿಯಮ ಮೀರಿ ಕಾಮಗಾರಿ ಕೈಗೊಂಡಿರುವ, ಕಾಮಗಾರಿ ಅಪೂರ್ಣವಾಗಿರುವ ಮತ್ತು ಕಳಪೆ ಗುಣಮಟ್ಟದ ಸಾಮಗ್ರಿ ಬಳಸಿ ಕಾಮಗಾರಿ ಕೈಗೊಂಡಿರುವ ದೂರುಗಳು ಬಂದಿವೆ. ಪೂರ್ಣವಾಗಿರುವ ಕೆಲವು ಕಾಮಗಾರಿಗಳು ಗುಣಮಟ್ಟದಿಂದ ಆಗಿಲ್ಲ. ಈ ಎಲ್ಲವುಗಳ ಕುರಿತು ಹಿರಿಯ ಅಧಿಕಾರಿಗಳ ಸಮಿತಿ ರಚಿಸಿ, ಸಮಗ್ರವಾಗಿ ತನಿಖೆ ಕೈಗೊಳ್ಳಬೇಕೆಂದು ಶಾಸಕರು ಹಿರಿಯ ಅಧಿಕಾರಿಗಳಿಗೆ ತಿಳಿಸಿದರು.

ಕೋಳಿಕೆರೆ, ಸಾಧನಕೇರಿಕೆರೆ ಅಭಿವೃದ್ಧಿಪಡಿಸಿ: ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅನುದಾನದಲ್ಲಿ ಧಾರವಾಡ ಕೋಳಿಕೆರೆ ಮತ್ತು ಸಾಧನಕೇರಿ ಕೆರೆಗಳನ್ನು ಅಭಿವೃದ್ಧಿಪಡಿಸಬೇಕು. ಕೆರೆ ಅಭಿವೃದ್ಧಿ ಪ್ರಾಧಿಕಾರದಿಂದ ಅನುದಾನ ಪಡೆಯಲು ಪ್ರಸ್ತಾವನೆ ಸಲ್ಲಿಸಿ ಎಂದು ಹುಡಾ ಆಯುಕ್ತ ಡಾ. ಸಂತೋμï ಬಿರಾದರ್ ಅವರಿಗೆ ಶಾಸಕರು ಹೇಳಿದರು.

ಬೀಜ ಗೊಬ್ಬರ ಕೊರತೆ ಆಗದಂತೆ ಎಚ್ಚರವಹಿಸಿ : ರೈತರು ಕೃಷಿ ಭೂಮಿ ಬಿತ್ತನೆಗೆ ಸಿದ್ದಗೊಳಿಸಿ ಮಳೆಗಾಗಿ ಕಾಯುತ್ತಿದ್ದಾರೆ. ಮಳೆ ಆದ ತಕ್ಷಣ ರೈತರು ಬೀಜ ಗೊಬ್ಬರಕ್ಕಾಗಿ ದಾವಂತ ಮಾಡುತ್ತಾರೆ. ಯಾವುದೇ ತೊಂದರೆ ಆಗದಂತೆ ಎಲ್ಲಾ ರೀತಿಯ ಬೀಜ ಗೊಬ್ಬರ ದಾಸ್ತಾನು ಹೊಂದುವಂತೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸುಷ್ಮಾ ಮಳಿಮಠಗೆ ಶಾಸಕರು ಸೂಚಿಸಿದರು.

ಜಾನುವಾರುಗಳಿಗೆ ಲಸಿಕೆ ಅಭಿಯಾನ ಆರಂಭಿಸಿ: ಮಳೆಗಾಲ ಶುರುವಾಗುವದರಿಂದ ಜಾನುವಾರುಗಳಿಗೆ ವಿವಿಧ ಖಾಯಿಲೆ ತಗಲುವ ಸಾಧ್ಯತೆ ಇರುತ್ತದೆ. ವರ್ಷದಲ್ಲಿ ಕನಿಷ್ಠ 2 ಬಾರಿ ಎಲ್ಲ ದನ, ಕರು ಜಾನುವಾರುಗಳಿಗೆ ಲಸಿಕೆ ಹಾಕಬೇಕು. ಬೇರೆ ರಾಜ್ಯಗಳಲ್ಲಿ ಮತ್ತೆ ಜಾನುವಾರುಗಳಿಗೆ ಚರ್ಮಗಂಟು ರೋಗ ಬಂದಿರುವ ವರದಿ ಆಗುತ್ತಿದ್ದು, ಜಿಲ್ಲೆಯಲ್ಲಿ ಈ ಕುರಿತು ಪಶುಸಂಗೊಪನೆ ಇಲಾಖೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕೆಂದು ಉಪ ನಿರ್ದೇಶಕ ಡಾ.ಉಮೇಶ್ ಕೊಂಡಿ ಅವರಿಗೆ ತಿಳಿಸಿದರು.

ನರೇಂದ್ರ ಮತ್ತು ತಡಕೊಡದಲ್ಲಿ ಪಿ.ಎಚ್.ಸಿ.ಗೆ ಪ್ರಸ್ತಾವನೆ ಸಲ್ಲಿಸಿ : ನರೇಂದ್ರ ಮತ್ತು ತಡಕೊಡ ಗ್ರಾಮಗಳು ಹೆಚ್ಚಿನ ಜನಸಂಖ್ಯೆ ಮತ್ತು ಹೆಚ್ಚು ಹಳ್ಳಿಗಳ ಸಂಪರ್ಕದ ಕೇಂದ್ರ ಸ್ಥಾನದಲ್ಲಿವೆ. ಇವುಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಅಗತ್ಯವಿದ್ದು, ತಕ್ಷಣ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಶಶಿ ಪಾಟೀಲ ಅವರಿಗೆ ಶಾಸಕರು ನಿರ್ದೇಶಿಸಿದರು.

ಬಾಕಿ ಹೆಸರಲ್ಲಿ ಮನೆಗಳ ವಿದ್ಯುತ್ ಸಂಪರ್ಕ ಕಡಿತ ಬೇಡ : ರಾಜ್ಯ ಸರಕಾರದ ನೂತನ ಯೋಜನೆ ಆರಂಭವಾಗುತ್ತಿದ್ದು, ಈ ಪೂರ್ವದಲ್ಲಿ ಬಾಕಿ ಹೆಸರಿನಲ್ಲಿ ಹಳ್ಳಿ ಜನರ ಮನೆಗಳ ವಿದ್ಯುತ್ ಸಂಪರ್ಕ ಕಡಿತ ಮಾಡಬೇಡಿ, ಜನರಿಗೆ ಅನಗತ್ಯ ತೊಂದರೆ ಆಗದಂತೆ ಕೆಲಸ ಮಾಡಿ ಎಂದು ಹೆಸ್ಕಾಂ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.

ಪಾಲಿಕೆ ವ್ಯಾಪ್ತಿ ವಾರ್ಡ್ ಅಭಿವೃದ್ಧಿಗೆ ಕ್ರಮ : ಮಹಾನಗರ ಪಾಲಿಕೆಯ 9 ವಾರ್ಡ್‍ಗಳು ಮತಕ್ಷೇತ್ರ ವ್ಯಾಪ್ತಿಯಲ್ಲಿದ್ದು, ಪ್ರತಿ ರಸ್ತೆ, ಚರಂಡಿ ಸ್ವಚ್ಛವಾಗಿರುವಂತೆ ಮತ್ತು ಕುಡಿಯುವ ನೀರು ಕೊರತೆ ಆಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಪಾಲಿಕೆ ಆಯುಕ್ತ ಡಾ.ಗೋಪಾಲಕೃಷ್ಣ ಅವರಿಗೆ ಶಾಸಕರು ತಿಳಿಸಿದರು.

ಪ್ರಮುಖ ಯೋಜನೆ ಜೆಜೆಎಂ, ಕಂದಾಯ, ಪೊಲೀಸ್, ಅಬಕಾರಿ, ಅರಣ್ಯ, ಸಾರ್ವಜನಿಕ ಶಿಕ್ಷಣ ಮುಜರಾಯಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಲೋಕೋಪಯೋಗಿ ಇಲಾಖೆ, ಸಣ್ಣ ನೀರಾವರಿ, ಕುಡಿಯುವ ನೀರು ಮತ್ತು ನೈರ್ಮಲ್ಯ, ನಿರ್ಮಿತಿ, ಕ್ರೆಡಿಲ್, ಸಾರಿಗೆ, ಆಹಾರ, ತೋಟಗಾರಿಕೆ ಸೇರಿದಂತೆ ಪ್ರಮುಖ ಇಲಾಖೆಗಳ ವಿವಿಧ ಯೋಜನೆ, ಕಾಮಗಾರಿಗಳ ಕುರಿತು ಶಾಸಕ ವಿನಯ ಕುಲಕರ್ಣಿ ಅವರು ಪ್ರಗತಿ ಪರಿಶೀಲನೆ ಮಾಡಿ, ಅಧಿಕಾರಿಗಳಿಂದ ವರದಿ ಪಡೆದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ರೇಖಾ ಡೊಳ್ಳಿನ, ಉಪವಿಭಾಗಾಧಿಕಾರಿ ಅಶೋಕ ತೇಲಿ, ತಹಸೀಲ್ದಾರ ಡಾ.ಮೋಹನ್ ಭಸ್ಮೆ, ಎಸ್.ಪಿ.ಕಚೇರಿಯ ಡಿ.ವೈ.ಎಸ್.ಪಿ. ಎಸ್.ಎಸ್. ಹಿರೇಮಠ , ಸಮಾಜ ಕಲ್ಯಾಣ ಇಲಾಖೆಯ ಅಪರ ನಿರ್ದೇಶಕ ಅಲ್ಲಾಭಕ್ಷ ಎಂ.ಎಸ್., ಪೆÇಲೀಸ್ ಆಯುಕ್ತರ ಕಚೇರಿಯ ಹಿರಿಯ ಪೆÇಲೀಸ್ ಅಧಿಕಾರಿ ಬಿ.ಹುಲ್ಲಣ್ಣವರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸರೋಜಾ ಹಳಕಟ್ಟಿ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಜಂಟಿ ನಿರ್ದೇಶಕ ವಿನೋದ ಕುಮಾರ ಹೆಗ್ಗಳಗಿ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಚೆಕ್ಕ್ ವಿತರಣೆ: ಇದೇ ಸಂದರ್ಭದಲ್ಲಿ 2023ರಲ್ಲಿ ಮಾರಡಗಿ ಗ್ರಾಮದಲ್ಲಿ ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದ ರೈತ ದ್ಯಾಮಣ್ಣ ಬಸಪ್ಪ ವನಹಳ್ಳಿ ಅವರ ಕುಟುಂಬ ಸದಸ್ಯರಿಗೆ ಶಾಸಕ ವಿನಯ ಕುಲಕರ್ಣಿ ಅವರು 5 ಲಕ್ಷ ಮೊತ್ತದ ಪರಿಹಾರಧನದ ಚೆಕ್ಕ್ ವಿತರಿಸಿದರು.


Related Articles

Leave a Reply

Your email address will not be published. Required fields are marked *

Back to top button