assemblyBJPCITY CRIME NEWSTechTWINCITY

ಬಸವೇಶ್ವರರ ಆಡಳಿತ ಮಾದರಿ ಸಂಶೋಧನೆಗೆ ಉತ್ತೇಜನ ನಿರ್ಧಾರ ಹೆಮ್ಮೆಯ ಸಂಗತಿ : ಶಾಸಕ ಅರವಿಂದ ಬೆಲ್ಲದ!

DAKHANI

POWER CITY NEWS:HUBBALLI/ಸರ್ವ ಸಮಾನತೆಗಳ ಪ್ರಜಾಪ್ರಭುತ್ವ ಪರಿಕಲ್ಪನೆಯ ಸಂಸತ್ ಅನ್ನುವಿಶ್ವದಲ್ಲಿ ಪ್ರಥಮವಾಗಿ ಜಾರಿಗೆ ತಂದವರು ಜಗಜ್ಯೋತಿ ಶ್ರೀ ಮಹಾತ್ಮ ಬಸವೇಶ್ವರರು. ಅದುವೇ ಅನುಭವ ಮಂಟಪ. ಇಂತಹ ಮಹಾನ್ ನಾಯಕರ ಆಡಳಿತ ಮಾದರಿ ಕುರಿತ ‘ಲೋಕ ಸಂಸದ್’ ಸಂಶೋಧನೆಗೆ ಉತ್ತೇಜನ ನೀಡಲು ಭಾರತ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಶಾಸಕ, ವಿಧಾನಸಭೆ ಪ್ರತಿಪಕ್ಷ ಉಪನಾಯಕ ಶ್ರೀ ಅರವಿಂದ ಬೆಲ್ಲದ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಭಾರತ ಸರ್ಕಾರದ ಅಧೀನದಲ್ಲಿರುವ ತಾಂತ್ರಿಕ ವಿಶ್ವ ವಿದ್ಯಾಲಯಗಳು, ಡೀಮ್ಡ್ ವಿಶ್ವ ವಿದ್ಯಾಲಯಗಳು, ತಾಂತ್ರಿಕ ನಿರ್ದೇಶನಾಲಯಗಳು, ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ (AICTE)ನಿಂದ ಅನುಮೋದಿತ ಸಂಸ್ಥೆಗಳ ನಿರ್ದೇಶಕರು ಮತ್ತು ಪ್ರಾಚಾರ್ಯರಿಗೆ ಜಗಜ್ಯೋತಿ ಮಹಾತ್ಮಾ ಬಸವೇಶ್ವರ ಅವರ ದಾರ್ಶನಿಕ ವಿಚಾರಗಳನ್ನೊಳಗೊಂಡ ಆಡಳಿತ ಮಾದರಿ ಕುರಿತ ಸಂಶೋಧನೆ ಉತ್ತೇಜಿಸಲು ಜುಲೈ 7ರಂದು ಭಾರತ ಸರ್ಕಾರ ನಿರ್ದೇಶಿಸಿದೆ.

ಸಾಮಾಜಿಕ ನ್ಯಾಯ, ಸಮಾನತೆ, ಪ್ರಜಾಪ್ರತಿನಿಧಿತ್ವ ಹಾಗೂ ಸ್ವಯಂ ಶಾಸಿತ ವಿಕೇಂದ್ರೀಕರಣದ ಯೋಚನೆಗಳನ್ನು ಪ್ರತಿಪಾದಿಸಿದ ಅನುಭವ ಮಂಟಪದ ಕಾರ್ಯ ಚಟುವಟಿಕೆಗಳನ್ನು ಲೋಕ ಸಂಸದ್ ಸಂಶೋಧನೆ ಒಳಗೊಂಡಿರಬೇಕು ಎಂದು ಸೂಚಿಸಿದೆ.

ಬಸವಣ್ಣನವರ ಮಹತ್ವದ ಬೋಧನೆಗಳಾದ ಕಾಯಕ, ದಾಸೋಹ, ಲಿಂಗಸಮಾನತೆ, ಮೌಢ್ಯ ನಿರಾಕರಣೆ, ಪ್ರಗತಿಪರ ವಿಚಾರಧಾರೆ, ಚಾರಿತ್ರ್ಯ, ಶುದ್ಧ ನಾಯಕತ್ವವು ಸಮಸಮಾಜಕ್ಕೆ ಕಾರಣ ಎನ್ನುವ ಅವರ ದರ್ಶನ ಇಂದಿಗೂ ಪ್ರಸ್ತುತ ಮತ್ತು ಆಧುನಿಕವಷ್ಟೇ ಅಲ್ಲದೆ, ವೈಜ್ಞಾನಿಕವೂ ಆಗಿದೆ. ಹೀಗೆ ಇಡೀ ಸಮಾಜದ ಸುಧಾರಣೆಗೆ ಕಾರಣವಾಗುವ ಅಂಶಗಳ ಕುರಿತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಂಶೋಧನಾತ್ಮಕ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳುವಂತೆ ಭಾರತ ಸರ್ಕಾರ ಮಹತ್ವದ ಆದೇಶ ನೀಡಿರುವುದು ಸಂತಸ ಹಾಗೂ ಹೆಮ್ಮೆ ಪಡುವಂತಹ ವಿಚಾರವಾಗಿದೆ.

ಉನ್ನತ ಶಿಕ್ಷಣದಲ್ಲಿ ಬಸವೇಶ್ವರರ ತತ್ವಜ್ಞಾನವನ್ನು ಮುಖ್ಯವಾಹಿನಿಗೆ ತರುವಲ್ಲಿ ಭಾರತ ಸರ್ಕಾರ ಆದೇಶಿಸಿರುವ ಉಪ ಕ್ರಮವನ್ನು ಹೃದಯಪೂರ್ವಕವಾಗಿ ಸ್ವಾಗತಿಸುತ್ತೇನೆ. ಯುವ ಪೀಳಿಗೆ, ವಿದ್ವಾಂಸರು ಹಾಗೂ ಸಾಧಕರಿಗೆ ಇದು ಸ್ಫೂರ್ತಿ ನೀಡಲಿ. ಜತೆಗೆ ಪ್ರತಿಯೊಬ್ಬರೂ ಇಂತಹ ಮಹತ್ವದ ಸಂಶೋಧನೆಯಲ್ಲಿ ಪಾಲ್ಗೊಂಡು ತಮ್ಮ ಜ್ಞಾನ ವಿಸ್ತರಿಸಿಕೊಂಡರೆ, ಭಾರತ ಸರ್ಕಾರದ ಆದೇಶವೂ ಸಾರ್ಥಕವಾಗಲಿದೆ ಎಂದು ಶಾಸಕ ಅರವಿಂದ ಬೆಲ್ಲದ ಅಭಿಪ್ರಾಯಪಟ್ಟಿದ್ದಾರೆ.

Related Articles

Leave a Reply

Your email address will not be published. Required fields are marked *