ಸ್ಥಳೀಯ ಸುದ್ದಿ

ಯಾದವಾಡದಲ್ಲಿ ಶಿವಲೀಲಾ ಕುಲಕರ್ಣಿ, ಹೆಬ್ಬಳ್ಳಿಯಲ್ಲಿ ವೈಶಾಲಿ ಕುಲಕರ್ಣಿ ಭರ್ಜರಿ ರೋಡ್ ಶೋ

ಧಾರವಾಡ

ಬಹಿರಂಗ ಪ್ರಚಾರಕ್ಕೆ ಇಂದು ಕೊನೆಯ ದಿನವಾದ್ದರಿಂದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಅವರ ಪರವಾಗಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಅವರು ಯಾದವಾಡ ಹಾಗೂ ಶಿಬಾರಗಟ್ಟಿ ಗ್ರಾಮಗಳಲ್ಲಿ ಭರ್ಜರಿ ರೋಡ್ ಶೋ ನಡೆಸುವ ಮೂಲಕ ಮತಯಾಚನೆ ಮಾಡಿದರು.

ಯಾದವಾಡ ಗ್ರಾಮಕ್ಕೆ ಬಂದ ಶಿವಲೀಲಾ ಕುಲಕರ್ಣಿ ಅವರ ಮೇಲೆ ಪುಷ್ಪವೃಷ್ಟಿ ಸುರಿಸುವ ಮೂಲಕ ಯಾದವಾಡ ಗ್ರಾಮಸ್ಥರು ಶಿವಲೀಲಾ ಕುಲಕರ್ಣಿಯವರನ್ನು ಬರಮಾಡಿಕೊಂಡರು.

ಈ ವೇಳೆ ಮಾತನಾಡಿದ ಶಿವಲೀಲಾ ಕುಲಕರ್ಣಿ, ನಾಡಿದ್ದು ಮತದಾನ ನಡೆಯಲಿದೆ. ವಿನಯ್ ಕುಲಕರ್ಣಿ ಅವರ ಕುಟುಂಬ ಜನತಾ ಆದೇಶಕ್ಕಾಗಿ ಕಾಯುತ್ತಿದೆ. ಜನ ಕೊಡುವ ತೀರ್ಪು ವಿನಯ್ ಕುಲಕರ್ಣಿ ಅವರ ಶಕ್ತಿ ಹೆಚ್ಚಿಸುತ್ತದೆ ಎಂದರು.

ಕ್ಷೇತ್ರದ ಎಲ್ಲೆಡೆ ವಿನಯ್ ಕುಲಕರ್ಣಿ ಅವರ ಪರವಾಗಿಯೇ ಅಲೆ ಇದೆ. ಬಿಜೆಪಿ ಮಾಡಿದ ಷಡ್ಯಂತ್ರಕ್ಕೆ ವಿನಯ್ ಕುಲಕರ್ಣಿ ಬಲಿಯಾಗಿದ್ದಾರೆ. ಅವರು ಜಿಲ್ಲೆಗೆ ಬರದಂತೆ ಮಾಡಲಾಗಿದೆ. ನಾವು ನ್ಯಾಯಾಲಯದ ಆದೇಶಕ್ಕೆ ತಲೆಬಾಗಲೇಬೇಕು. ಬಿಜೆಪಿ ಸರ್ಕಾರ ಐಟಿ ಇಲಾಖೆಯನ್ನು ದುರುಪಯೋಗಪಡಿಸಿಕೊಂಡು ನಮ್ಮ ಬೆಂಬಲಿಗರ ಮೇಲೆ ನಿರಂತರವಾಗಿ ದಾಳಿ ಮಾಡಿಸುತ್ತಿದೆ.

ಬಿಜೆಪಿಯ ಇಂತಹ ಕುತಂತ್ರಕ್ಕೆ ನಾವು ಹೆದರುವುದಿಲ್ಲ. ಮೇ.13 ರಂದು ಜನ ಕೊಡುವ ತೀರ್ಪು ಬಿಜೆಪಿಗೆ ಮುಖಭಂಗವಾಗುವಂತಾಗಬೇಕು ಎಂದರು.

ವಿನಯ್ ಕುಲಕರ್ಣಿಯವರನ್ನು ರಾಜಕೀಯವಾಗಿ ಕುಗ್ಗಿಸಲು ಏನೆಲ್ಲ ಪ್ರಯತ್ನಗಳು ನಡೆಯುತ್ತಿವೆ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಆದರೆ, ಅವರು ರಾಜಕೀಯವಾಗಿ ಇನ್ನಷ್ಟು ಪುಟಿದೇಳುತ್ತಾರೆ.

ವಿನಯ್ ಕುಲಕರ್ಣಿ ಸಚಿವರಿದ್ದ ಸಮಯದಲ್ಲಿ ಯಾವೆಲ್ಲ ಕೆಲಸಗಳು ಆಗಿವೆ ಎಂಬುದು ಜನಮಾನಸದಲ್ಲಿ ಉಳಿದುಕೊಂಡಿವೆ. ವಿನಯ್ ಕುಲಕರ್ಣಿಯವರು ಜಿಲ್ಲೆಯ ಹೊರಗಿದ್ದರೂ ಅಭೂತಪೂರ್ವ ಗೆಲುವು ಸಾಧಿಸುತ್ತಾರೆ. ಅವರಿಗಿರುವ ಜನಬೆಂಬಲ ನೋಡಿ ಬಿಜೆಪಿಯವರಿಗೆ ನಡುಕ ಶುರವಾಗಿದೆ. ಹೀಗಾಗಿಯೇ ಐಟಿ ದಾಳಿಯಂತಹ ದಾಳಿ ನಡೆಸುತ್ತಿದ್ದಾರೆ ಎಂದು ಹರಿಹಾಯ್ದರು.

ಇತ್ತ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ವಿನಯ್ ಕುಲಕರ್ಣಿ ಅವರ ಪುತ್ರಿ ವೈಶಾಲಿ ಅವರು ತಮ್ಮದೇ ಶೈಲಿಯಲ್ಲಿ ಬೃಹತ್ ಶಕ್ತಿ ಪ್ರದರ್ಶನ ಮಾಡಿದರು.

ಹೆಬ್ಬಳ್ಳಿ ಗ್ರಾಮದಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಜನರೊಂದಿಗೆ ಬೃಹತ್ ರೋಡ್ ಶೋ ನಡೆಸಿದ ವೈಶಾಲಿ, ತಮ್ಮ ತಂದೆಯವರ ಪರವಾಗಿ ಮತಯಾಚನೆ ಮಾಡಿದರು.

ಹೆಬ್ಬಳ್ಳಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಬೃಹತ್ ರೋಡ್ ಶೋ ನಡೆಸಿದ ವೈಶಾಲಿ ಕುಲಕರ್ಣಿಯವರು, ಅಬ್ಬರದ ಪ್ರಚಾರ ನಡೆಸಿದರು. ನಂತರ ಗ್ರಾಮದ ಬಸ್ ನಿಲ್ದಾಣಕ್ಕೆ ಬಂದು ಸಮಾವೇಶಗೊಂಡ ಜನರನ್ನುದ್ದೇಶಿಸಿ ಮಾತನಾಡಿದ ವೈಶಾಲಿ, ನಮ್ಮ ತಂದೆಯವರು ಅನಿವಾರ್ಯ ಕಾರಣಗಳಿಂದ ಇಲ್ಲಿಗೆ ಬಂದು ಮತಯಾಚನೆ ಮಾಡಲು ಆಗುತ್ತಿಲ್ಲ. ನಮ್ಮ ತಂದೆ ಇಲ್ಲವೆಂದರೂ ಅವರ ಶಕ್ತಿ ಏನು ಎಂದು ಎಲ್ಲರಿಗೂ ಗೊತ್ತೇ ಇದೆ.

ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬಂದು ನಮ್ಮ ತಂದೆಯವರ ಪರವಾಗಿ ನಿಂತ ನಿಮಗೆಲ್ಲರಿಗೂ ನಮ್ಮ ಕುಟುಂಬ ಚಿರಋಣಿಯಾಗಿರುತ್ತದೆ. ದಯವಿಟ್ಟು ಮೇ.10ಕ್ಕೆ ವಿನಯ್ ಕುಲಕರ್ಣಿಯವರಿಗೆ ಮತ ನೀಡುವ ಮೂಲಕ ಅವರ ಕೈ ಬಲಪಡಿಸಬೇಕು ಎಂದರು.

ಶಿವಲೀಲಾ ಕುಲಕರ್ಣಿ ಅವರಿಗೆ ಜಿಲ್ಲಾ ಪಂಚಾಯ್ತಿ ಈಶ್ವರ ಶಿವಳ್ಳಿ, ಮಾಜಿ ಸದಸ್ಯ ಕಲ್ಲಪ್ಪ ಪುಡಕಲಕಟ್ಟಿ ಮಡಿವಾಳಪ್ಪ ದಿಂಡಲಕೊಪ್ಪ,ಚನಬಸಪ್ಪ ಮಟ್ಟಿ ಸೇರಿದಂತೆ ಅನೇಕರು ಸಾಥ್ ನೀಡಿದರು.

Related Articles

Leave a Reply

Your email address will not be published. Required fields are marked *

Back to top button