ಧಾರವಾಡಸ್ಥಳೀಯ ಸುದ್ದಿಹುಬ್ಬಳ್ಳಿ

3 ಕೋಟಿ ವೆಚ್ಚದ ರಸ್ತೆ ನಿರ್ಮಾಣ ಹಾಗೂ 1 ಕೋಟಿ ವೆಚ್ಚದ ಯುಜಿಡಿ ಕಾಮಗಾರಿಗೆ ಶೀಘ್ರ ಚಾಲನೆ : ಶೆಟ್ಟರ್

ಹುಬ್ಬಳ್ಳಿ(ಕರ್ನಾಟಕ ವಾರ್ತೆ).ಡಿ.31: ನಗರ ವಿಕಾಸ ಯೋಜನೆಯ 3 ಕೋಟಿ ಅನುದಾನದಲ್ಲಿ ಚನ್ನಪೇಟೆ, ಅರವಿಂದ ನಗರ ಹಾಗೂ ಹಳೆ ಹುಬ್ಬಳ್ಳಿ ಮುಖ್ಯ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು. ವಾರ್ಡ್ ನಂ 55 ರ ವ್ಯಾಪ್ತಿಯಲ್ಲಿ ಯುಜಿಡಿ ಹಾಗೂ ಒಳಚರಂಡಿ ನಿರ್ಮಿಸಲು ಸರ್ಕಾರ 1 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದೆ. ಶೀಘ್ರವೇ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಜಗದೀಶ್ ಶೆಟ್ಟರ್ ಹೇಳಿದರು.

ಹಳೇ ಹುಬ್ಬಳ್ಳಿ ದಿಡ್ಡಿ ಓಣಿ ಉದ್ಯಾನವನದಲ್ಲಿಂದು ಜರುಗಿದ ಜನಸಂಪರ್ಕ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ದಾಳಿಂಬರಪೇಟೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಮಳೆಗಾಲದಲ್ಲಿ ನಾಲೆಗಳು ತುಂಬಿ ಚರಂಡಿ ನೀರು ರಸ್ತೆ ಹಾಗೂ ಮನೆಗಳಿಗೆ ಹರಿಯುತ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಯುಜಿಡಿ‌ ಹಾಗೂ ಒಳಚರಂಡಿ ಕಾಮಗಾರಿ ಆರಂಭವಾಗುವ ಮುನ್ನವೇ, ಈ ಭಾಗದಲ್ಲಿನ ಸಮಸ್ಯೆ ಕುರಿತು ಸರ್ವೇ ಮಾಡಿ ವರದಿ ನೀಡುವಂತೆ ಅಧಿಕಾರಿಗಳಿಗೆ ಜಗದೀಶ್ ಶೆಟ್ಟರ್ ಸೂಚಿಸಿದರು.

ಸಭೆಯಲ್ಲಿ ಹಳೆ ಹುಬ್ಬಳ್ಳಿ ಭಾಗದಲ್ಲಿ ಕಳ್ಳರ ಹಾವಳಿ ಜಾಸ್ತಿಯಾಗಿದೆ. ಸಿ.ಸಿ ಟಿ.ವಿ. ಕ್ಯಾಮೆರಾ ಅಳವಡಿಸುವಂತೆ ಸಾರ್ವಜನಿಕರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಜಗದೀಶ್ ಶೆಟ್ಟರ್ ಕಳ್ಳತನ ಹಾಗೂ ಕಳ್ಳರ ಹಾವಳಿ ಕುರಿತು
ಪೊಲೀಸ್ ಕಮಿಷನರ್‌ ಜೊತೆ ಚರ್ಚೆಸುತ್ತೇನೆ. ಕೇಂದ್ರ ಸರ್ಕಾರದ ಹಲವಾರು ಯೋಜನಯಡಿ‌ ಸಿ.ಸಿ. ಟಿ.ವಿ ಕ್ಯಾಮೆರಾ ಅಳವಡಿಸಲು ಅವಕಾಶವಿದೆ. ಈ ಕುರಿತು ಕೇಂದ್ರ ಸಚಿವರು ಹಾಗೂ ಸಂಸದರಾದ ಪ್ರಲ್ಹಾದ್ ಜೋಶಿ ಅವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ.

ಸಂಗೀತಾ ಕಾಟವೆ ಎಂಬ ಮೃತರ ಮರಣ ಪ್ರಮಾಣ ಪತ್ರ ನೀಡುವಲ್ಲಿ ಉಂಟಾದ ವಿಳಂಬದ ಬಗ್ಗೆ, ಸಂಬಂಧಿಯೊಬ್ಬರು ಸಭೆಯಲ್ಲಿ ಅಳಲು ತೋಡಿಕೊಂಡರು. ಅಳಲು ಆಲಿಸಿದ ಜಗದೀಶ್ ಶೆಟ್ಟರ್, ಸರ್ಕಾರ ಮನೆ ಮನೆಗೆ ತೆರಳಿ ಜನನ ಹಾಗೂ ಮರಣ ಪತ್ರ ವಿತರಿಸಲು ಯೋಚಿಸುತ್ತಿದೆ. ಆದರೆ ಪಾಲಿಕೆ ಅಧಿಕಾರಿಗಳು ಮರಣಸಿದ ವ್ಯಕ್ತಿಗಳ ಪಂಚನಾಮೆ ಮಾಡಲು ಅಸಡ್ಡೆ ತೋರುವುದು ಸಲ್ಲದು. ಕೆಲಸ ಮಾಡಲು ಅಧಿಕಾರಿಗಳು ಸಿದ್ದವಿಲ್ಲ ಎಂದರೆ ಹೇಗೆ? ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಮೊಚಿಗಾರ ಸಂಘದಿಂದ ಸಮುದಾಯ ಭವನ ನಿರ್ಮಿಸಲು ಅನುದಾನ ಒದಗಿಸಲು ಸಭೆಯಲ್ಲಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ
ಅಸಂಘಟಿತ ಕಾರ್ಮಿರಿಗೆ ಗುರುತಿ‌ನ ಚೀಟಿ ಹಾಗೂ ಈ – ಶ್ರಮ್ ಕಾರ್ಡ್ ವಿತರಣೆ ಮಾಡಲಾಯಿತು.

ಆಸಾರ್ ಓಣಿಯ ಸಿಕ್ಕಲಗಾರ ತಾಂಡಾ, ಆಸಾರ್ ಹೊಂಡದ ಪರಿಶಿಷ್ಟ ಜಾತಿ‌ ಹಾಗೂ ಪಂಗಡದ ಜನರಿಗೆ ಕೊಳಚೆ ಮಂಡಳಿ ವತಿಯಿಂದ ಜಿ+2 ಮಾದರಿ‌ಯಲ್ಲಿ ಮನೆಗಳನ್ನು ನಿರ್ಮಿಸಿಕೊಡುವಂತೆ ನಿವಾಸಿಗಳು ಮನವಿ ಸಲ್ಲಿಸಿದರು.

ಸಭೆಯಲ್ಲಿ ಕರ್ನಾಟಕ ಮಾರ್ಜಕ ನಿಯಮಿತದ ನಿರ್ದೇಶಕ ಮಲ್ಲಿಕಾರ್ಜುನ ಸಾವಕಾರ, ಪಾಲಿಕೆ ಸದಸ್ಯ ಸಂತೋಷ್ ಚವ್ಹಾಣ್, ಮಾಜಿ ಮೇಯರ್‌ಗಳಾದ ಪಾಂಡುರಂಗ ಪಾಟೀಲ ಹಾಗೂ ಡಿ.ಕೆ.ಚವ್ಹಾಣ್ ಸೇರಿದಂತೆ ಪಾಲಿಕೆ ವಲಯ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button