ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಗೆ:ರಾಜಣ್ಣ ಕೊರವಿ!
NEWS

POWERT CITY NEWS : HUBBALLI ಹುಬ್ಬಳ್ಳಿ: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷನಾಗಿ ಕಳೆದ 3 ವರ್ಷಗಳಿಂದ ಸೇವೆ ಮಾಡಲು ಅವಕಾಶ ಸಿಕ್ಕಿರುವುದು ನನ್ನ ಜೀವನದ ಅತೀ ಅಮೂಲ್ಯ ಸಂದರ್ಭದಲ್ಲಿ ಒಂದಾಗಿದೆ. ಈ ವೇಳೆ ಜನಜಾಗೃತಿ ವೇದಿಕೆಯ ಮೂಲಕ ಮದ್ಯಪಾನಾದಿ ದುಶ್ಚಟಗಳ ವಿರುದ್ಧ ಹೋರಾಟ ಮಾಡುವ ಆಂದೋಲನದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಸಾರ್ಥಕತೆಯಿದೆ ಎಂದು ರಾಜಣ್ಣ ಕೊರವಿ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮನುಷ್ಯನ ಅಂತ:ಕರಣದಲ್ಲಿಯೇ ಇರುವ ಅಂತಃಶಕ್ತಿಯನ್ನು ಮನಗಾಣದೆ ತಾತ್ಕಾಲಿಕ ಸಂತೋಷಕ್ಕಾಗಿ ದುರ್ವಸನಕ್ಕೆ ಬಲಿಯಾಗಿರುವ ಅದೆಷ್ಟೋ ಕುಟುಂಬಗಳ ಕಣ್ಣೀರು ಒರೆಸುವುದು ನಿಜವಾಗಿಯೂ ಪುಣ್ಯದ ಕಾರ್ಯವಾಗಿದೆ. ಜಗತ್ತಿನಲ್ಲಿ ಯಾರೂ ಮಾಡದ ಈ ವಿಶಿಷ್ಟ ಸೇವೆಯನ್ನು ಪೂಜ್ಯ ಖಾವಂದರು. ಮಾತೃಶ್ರೀ ಅಮ್ಮನವರು ಮಾರ್ಗದರ್ಶನಕರಾಗಿ, ಪ್ರೇರಕರಾಗಿ ನಿಂತು ಮಾಡುತ್ತಿರುವ ಕಾರಣಕ್ಕಾಗಿಯೇ ಈ ಆಂದೋಲನ ಇಂದು ರಾಷ್ಟ್ರಮಟ್ಟದಲ್ಲಿಯೇ ಗುರುತಿಸುವಂತೆ ಬೆಳೆದು ನಿಂತಿದೆ ಎಂದರು.
1992ರಲ್ಲಿ ಜನಜಾಗೃತಿ ವೇದಿಕೆ ಎಂಬ ಜನರ ಸಂಘಟನೆ ಬೆಳ್ತಂಗಡಿಯಲ್ಲಿ ಪಾರಂಭಗೊಂಡು ಇದೀಗ ರಾಜ್ಯದೆಲ್ಲೆಡೆ ಹೆಮ್ಮರವಾಗಿ ಬೆಳೆದುನಿಂತಿದೆ. ರಾಜ್ಯಾದ್ಯಂತ ವಾರ್ಷಿಕವಾಗಿ 150 ಮದ್ಯವರ್ಜನ ಶಿಬಿರಗಳು ನಡೆಯುತ್ತಿವೆ. ಎಲ್ಲಾ ಶಿಬಿರಗಳು ಜನರ ಭಾಗವಹಿಸುವಿಕೆಯಿಂದ. ಸಹಕಾರದಿಂದ ಉತ್ತಮವಾಗಿ ಹಾಗೂ ಸಮಾಜಕ್ಕೆ ವ್ಯಸನಮುಕ್ತತೆಯ ಸಂದೇಶವನ್ನು ನೀಡುವುದರ ಜೊತೆಗೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ನನ್ನ ಅವಧಿಯಲ್ಲಿ 316 ಮದ್ಯವರ್ಜನ ಶಿಬಿರಗಳನ್ನು ಆಯೋಜಿಸಲು ಸಾಧ್ಯವಾಯಿತು. ಈ ಮೂಲಕ 1,97,72 ಮಂದಿಗೆ ಪರಿವರ್ತನೆಯಾಗಲು ಅವಕಾಶವಾಗಿದೆ. ಅಂತೆಯೇ 4507 ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಗಳ ಮೂಲಕ 4,08,724 ಮಂದಿ ವಿದ್ಯಾರ್ಥಿಗಳಿಗೆ ದುಶ್ಚಟದ ಪರಿಣಾಮಗಳ ಕುರಿತು ಮಾಹಿತಿ, 31 ನವಜೀವನ ಪೋಷಕರ ತರಬೇತಿಗಳು, 59 ಮಂದಿಗೆ ಜಾಗೃತಿ ಅಣ್ಣ, ಮಿತ್ರ ಪಶಸ್ತಿ, ಹಾಗೂ 4 ಶತದಿನೋತ್ಸವ ಕಾರ್ಯಕ್ರಮಗಳು, 21 ಗಾಂಧಿಜಯಂತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ವ್ಯಸನಮುಕ್ತರಿಗೆ ಸ್ವ ಉದ್ಯೋಗದಲ್ಲಿ ಮುಂದುವರಿಯಬೇಕೆಂಬ ಉದ್ದೇಶದೊಂದಿಗೆ ನನ್ನ ಅವಧಿಯಲ್ಲಿ 7 ತರಬೇತಿಗಳನ್ನು ರುಡ್ ಸೆಟ್ ಸಂಸ್ಥೆಯಲ್ಲಿ ಆಯೋಜಿಸಿ, 513 ಜನರಿಗೆ ಸ್ವ ಉದ್ಯೋಗಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಇವರಿಗೆ ರಾಜ್ಯವೇದಿಕೆಯಿಂದ ಸೋತ್ಸಾಹಧನವನ್ನೂ ನೀಡುತ್ತಿದ್ದು ಈ ಮೂಲಕ ಅವರ ಸಾಧನೆಗೆ ಪ್ರೋತ್ಸಾಹ ನೀಡಿದಂತಾಗಿದೆ. ಅಲ್ಲದೆ ಆಸಹಾಯಕ ನವಜೀವನ ಸದಸ್ಯರಿಗೂ ಅನುದಾನವನ್ನು ನೀಡುವ ಕಾರ್ಯ ವೇದಿಕೆಯ ವತಿಯಿಂದ ನಡೆಯುತ್ತಿದೆ. ಸಂಶೋಧನ ಕೇಂದ್ರದ ಮೂಲಕ ಸಂಶೋಧನ ಕಾರ್ಯಗಳಿಗೆ ಆದ್ಯತೆ, ಶಿಬಿರಾರ್ಥಿಗಳ ಕೇಸ್‌ಶೀಟ್‌ಗಳ ದಾಖಲೀಕರಣ, ವೆಬ್ ಸೈಟ್ ಮತ್ತು ಫೇಸ್ ಬುಕ್ ಅಂತರ್ಜಾಲ ತಾಣದ ಮೂಲಕ ಪ್ರಚಾರ, ಜನಜಾಗೃತಿ ವೇದಿಕೆ ಸಭೆಗಳನ್ನು ನಡೆಸುವ ಪ್ರಯತ್ನ ರಾಜ್ಯಾದ್ಯಂತ ನಡೆಯುವ ನವಜೀವನ ಸಮಾವೇಶಗಳು, ವಾತ್ಸಲ್ಯ ಕಾರ್ಯಕ್ರಮ, ವಿಪತ್ತು ನಿರ್ವಹಣಾ ಕಾರ್ಯಕ್ರಮ, ಸಾಮಾಜಿಕ ಆರಣೀಕರಣ ಕಾರ್ಯಕ್ರಮ.. ಇವೆಲ್ಲವುಗಳಲ್ಲಿ ಭಾಗವಹಿಸಿದ ಕ್ಷಣ ಎಲ್ಲವೂ ಆವಿಸ್ಮರಣೀಯವಾಗಿದೆ ಎಂದು ತಿಳಿಸಿದರು.
ನನ್ನ ಅವಧಿಯಲ್ಲಿ ನನಗೆ ತುಂಬು ಹೃದಯದ ಸಹಕಾರ ನೀಡಿದ ಡಾ| ಎಲ್.ಹೆಚ್. ಮಂಜುನಾಥ್, ಮತ್ತು ಯೋಜನೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಶ್ರೀ ಆನಿಲ್ ಕುಮಾರ್ ರವರಿಗೆ ಕೃತಜ್ಞತೆಗಳು,
ಹಾಗೂ ನನಗೆ ವೇದಿಕೆಯ ಕಾರ್ಯದರ್ಶಿಯಾಗಿ ಸಹಕರಿಸಿದ ಜನಜಾಗೃತಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಶ್ರೀ ವಿವೇಕ್ ವಿ. ಪ್ಯಾಸ್ ರವರಿಗೆ ಕೃತಜ್ಞತೆಗಳು, ಯೋಜನೆಯ ಎಲ್ಲಾ ಪ್ರಾದೇಶಿಕ ನಿರ್ದೇಶಕರುಗಳು, ವೇದಿಕೆಯ ಜಿಲ್ಲಾಧ್ಯಕ್ಷರು, ಜಿಲ್ಲಾ ಕಾರ್ಯದರ್ಶಿಗಳು, ಯೋಜನಾಧಿಕಾರಿಗಳು, ಕಾರ್ಯಕರ್ತರಿಗೆ, ವೇದಿಕೆಯ ಸಿಬ್ಬಂದಿ ವರ್ಗದವರಿಗೆ. ದೇವಳ ಹಾಗೂ ವಸತಿ ಗೃಹಗಳ ಸಿಬ್ಬಂದಿಗಳಿಗೆ ನಾನು ಆಭಾರಿಯಾಗಿದ್ದೇನೆ. ಹಾಗೂ ಮುಂದಕ್ಕೆ ಇದೇ ಉತ್ಸಾಹದಿಂದ ನನ್ನ ಕೆಲಸ ಕಾರ್ಯಗಳನ್ನು ಮಾಡಲು ನಾನು ಬದ್ಧನಿದ್ದೇನೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಮೇಶ ಮಹದೇವಪ್ಪನವರ ಸೇರಿದಂತೆ ಮುಂತಾದವರು ಇದ್ದರು.
