ಅಣ್ಣಿಗೇರಿರಾಜಕೀಯರಾಜ್ಯಸ್ಥಳೀಯ ಸುದ್ದಿ

ಇಂದಿನಿಂದ ಅಣ್ಣಿಗೇರಿ ತಾಲೂಕಿನಲ್ಲಿ 24×7ನೀರಿನ ಭಾಗ್ಯ!

Power city news ಜ‌.13: ಸುಮಾರು 20 ವರ್ಷಗಳಿಗಿಂತ ಅಧಿಕ ವರ್ಷಗಳ ಕಾಲ ನೀರಿಗಾಗಿ ಈ ಭಾಗದ ಜನರು ಹೋರಾಟ ಮಾಡಿದ್ದಾರೆ. ಬಸಾಪುರ ಕೆರೆ ನಿರ್ಮಾಣದ ಮೂಲಕ ಅಣ್ಣಿಗೇರಿ ಜನರ ಬಹುದಿನಗಳ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರೆತಂತಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಪ್ರಹ್ಲಾದ್ ಜೋಶಿ ಹೇಳಿದರು.

ಇಂದು ಬಸಾಪುರ ಗ್ರಾಮದ ಹತ್ತಿರ ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ, ಜಿಲ್ಲಾ ನಗರಾಭಿವೃದ್ಧಿ ಕೋಶ, ಜಿಲ್ಲಾಡಳಿತ, ಪುರಸಭೆ ಅಣ್ಣಿಗೇರಿ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಯೋಗದಲ್ಲಿ ಬಸಾಪುರ ಗ್ರಾಮದ ಹತ್ತಿರ 76 ಎಕರೆ ಪ್ರದೇಶದಲ್ಲಿ ಪುರಸಭೆ ಮಾಲೀಕತ್ವದ ಹೊಸದಾಗಿ ನಿರ್ಮಿಸಿರುವ 1750 ಮಿಲಿಯನ್ ಲೀಟರ್ ಸಾಮರ್ಥ್ಯದ ಕೆರೆಗೆ ಬಾಗಿನ ಅರ್ಪಣೆ ಹಾಗೂ ರೂ. 54 ಕೋಟಿ ವೆಚ್ಚದಲ್ಲಿ ಅಣ್ಣಿಗೇರಿ ಪಟ್ಟಣಕ್ಕೆ 24*7 ನಿರಂತರ ಕುಡಿಯುವ ನೀರಿನ ಯೋಜನೆ ಕಾಮಗಾರಿ ಲೋಕಾರ್ಪಣೆ ಮತ್ತು ಕೆರೆಗೆ ಭೂಮಿ ನೀಡಿದ ರೈತರಿಗೆ ಸನ್ಮಾನಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು‌.

ಸತತ ಮತ್ತು ಸುದೀರ್ಘ ಹೋರಾಟದ ಫಲದಿಂದ ಅಣ್ಣಿಗೇರಿಗೆ ಕುಡಿಯುವ ನೀರು ಸಿಗುತ್ತಿದೆ. ಮಳೆ ಜಾಸ್ತಿಯಾಗಿದ್ದರಿಂದ ಈ ಭಾಗದ ರಸ್ತೆಗಳು ಹಾಳಾಗಿವೆ. ರಸ್ತೆಗಳನ್ನು ಶೀರ್ಘದಲ್ಲಿ ದುರಸ್ತಿ ಮಾಡಲಾಗುವುದು. ಹಲವು ವರ್ಷಗಳ ಹೋರಾಟದ ಬಳಿಕ ಕಳಸಾ ಬಂಡೂರಿ ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಬೆಳೆ ವಿಮೆ ಹಣವನ್ನು ರೈತರಿಗೆ ನೀಡಲಾಗುತ್ತಿದೆ. ಬೆಳೆ ಹಾನಿ ಪರಿಹಾರವನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ನಗರಾಭಿವೃದ್ಧಿ ಸಚಿವರಾದ ಬಿ.ಎ.ಬಸವರಾಜ ( ಭೈರತಿ) ಅವರು ಮಾತನಾಡಿ, ದಾಹ ಮುಕ್ತ ಕರ್ನಾಟಕ ಮಾಡಲು ಸಂಕಲ್ಪ ಮಾಡಲಾಗಿದೆ. ನದಿ ಮೂಲದಿಂದ ನೀರು ತರುವ ಕೆಲಸ ಮಾಡಲಾಗುತ್ತಿದೆ. ಅಣ್ಣಿಗೇರಿಗೆ ಶಾಶ್ವತ ಕುಡಿಯುವ ನೀರಿನ ಬೇಡಿಕೆ ಈಡೇರಲಿದೆ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ್ ಶೆಟ್ಟರ್ ಮಾತನಾಡಿ, ಬಸಾಪುರ ಕೆರೆ ಈ ಭಾಗದ ಜನರ ಜೀವನಾಡಿಯಾಗಲಿದೆ. ಎಲ್ಲ ಮೂಲ ಸೌಕರ್ಯಗಳಿಗಿಂತ ಕುಡಿಯುವ ನೀರು ಹೆಚ್ಚು ಅವಶ್ಯಕ. ನಳಗಳ ಮೂಲಕ ಪ್ರತಿ ಮನೆಗೆ ಕುಡಿಯುವ ನೀರು ಒದಗಿಸಲಾಗುವುದು. ಕೇಂದ್ರ ಸರ್ಕಾರ ಕಳಸಾ ಬಂಡೂರಿ ಯೋಜನೆಗೆ ಒಪ್ಪಿಗೆ ನೀಡಿದೆ. ಇದರಿಂದ ಮಲಪ್ರಭೆಗೆ ಹೆಚ್ಚಿನ ನೀರು ಬರುತ್ತದೆ. ನರಗುಂದ, ನವಲಗುಂದ ರೈತರ ಹೋರಾಟದ ಫಲ ಸಫಲವಾಗಲಿದೆ. ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ 43 ಹೊಸ ತಾಲೂಕುಗಳ ರಚನೆಗೆ ಅವಕಾಶ ನೀಡಿರುವೆ. ಈಗ ಅಣ್ಣಿಗೇರಿ ಮತ್ತು ಅಳ್ನಾವರ ತಾಲೂಕು ಕೇಂದ್ರಗಳಾಗಿವೆ. ರಾಣಿ ಚೆನ್ನಮ್ಮ ಆಡಳಿತ ನಡೆಸಿದ ಕಿತ್ತೂರನ್ನು ಸಹ ತಾಲೂಕಾಗಿ ಘೋಷಣೆ ಮಾಡಲಾಯಿತು ಎಂದು ಹೇಳಿದರು.

ಕೈಮಗ್ಗ, ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವರಾದ ಶಂಕರ್ ಪಾಟೀಲ್ ಮುನೇನಕೊಪ್ಪ ಮಾತನಾಡಿ, ಅಣ್ಣಿಗೇರಿ ಪಟ್ಟಣವು ಬಹಳ ವರ್ಷಗಳ ಕಾಲ ನೀರಿನ ಸಮಸ್ಯೆಯನ್ನು ಎದುರಿಸುತ್ತಿತ್ತು. ಅಣ್ಣಿಗೇರಿ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ದೃಢ ನಿರ್ಧಾರ ಮಾಡಿದೆ. ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿ ಆಗಿದ್ದಾಗ ಈ ಯೋಜನೆಗೆ ಅನುಮೋದನೆ ದೊರೆತಿತ್ತು. ಈ ಕೆರೆ ನಿರ್ಮಾಣದಿಂದ ಬರದ ನಾಡು ಎಂಬ ಹಣೆಪಟ್ಟಿಯನ್ನು ಕಿತ್ತೆಸೆಯಲಾಯಿತು. ಮಕರ ಸಂಕ್ರಾಂತಿ ಮುನ್ನಾದಿನ 21 ವಾರ್ಡ್ ಗಳಿಗೆ ಪೈಪಲೈನ್ ಅಳವಡಿಸಿ ನೀರು ಪೂರೈಕೆ ಮಾಡಲಾಗುವುದು. ಬೆಂಗಳೂರು, ಹುಬ್ಬಳ್ಳಿ ಧಾರವಾಡ ನಗರಗಳಂತೆ ಅಣ್ಣಿಗೇರಿಗೆ 24×7 ನಿರಂತರ ಕುಡಿಯುವ ನೀರು ಒದಗಿಸಲಾಗುತ್ತದೆ. ಕಳಸಾ ಬಂಡೂರಿ ನೀರು ಮಲಪ್ರಭೆಯ ಒಡಲನ್ನು ಸೇರಬೇಕು. ಈ ಭಾಗದ ರೈತರು ಹಲವಾರು ವರ್ಷಗಳಿಂದ ಹೋರಾಟ ಮಾಡಿದ್ದಾರೆ. ಕೇಂದ್ರ ಸರ್ಕಾರ ಡಿಪಿಆರ್ ಗೆ ಒಪ್ಪಿಗೆ ಸೂಚಿಸಿದೆ. ಅಣ್ಣಿಗೇರಿ ತಾಲೂಕು ಆದ ಬಳಿಕ ತಾಲೂಕು ಪಂಚಾಯತ, ಖಜಾನೆ ಕಚೇರಿಯನ್ನು ಆರಂಭಿಸಲಾಗಿದೆ‌. ಅಣ್ಣಿಗೇರಿಯಲ್ಲಿ ರೂ. 5 ಕೋಟಿ ವೆಚ್ಚದಲ್ಲಿ ಕ್ರೀಡಾ ಪಾರ್ಕ್ ನಿರ್ಮಿಸಲಾಗುವುದು. 71 ಹಳ್ಳಿಗಳಿಗೆ ಜಲಧಾರೆ ಯೋಜನೆ ಮೂಲಕ ಮನೆ ಬಾಗಿಲಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ. ಬಸಾಪುರ ರೈತರು ಭೂಮಿ ಕೊಡದಿದ್ದರೆ ಈ ಯೋಜನೆ ಸಾಕಾರಗೊಳ್ಳುತ್ತಿರಲಿಲ್ಲ. ಬರ ಮುಕ್ತ ಅಣ್ಣಿಗೇರಿ ಮಾಡುವ ಕನಸು ಹೊತ್ತಿರುವೆ. ಜಿಲ್ಲೆಯಲ್ಲಿ 6 ಸಕ್ಕರೆ ಕಾರ್ಖಾನೆ ಮತ್ತು ಜವಳಿ ಪಾರ್ಕ್ ಸ್ಥಾಪಿಸಲಾಗುವುದು. ರೂ. 250 ಕೋಟಿ ವೆಚ್ಚದಲ್ಲಿ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಅಣ್ಣಿಗೇರಿ ಪುರಸಭೆ ಅಧ್ಯಕ್ಷೆ ಗಂಗಾ ಕರೆಟ್ಟನವರ ಮಾತನಾಡಿ, ಅಣ್ಣಿಗೇರಿ ಜನರ ಬಹು ದಿನಗಳ ಕನಸು ಇಂದು ನನಸಾಗಿದೆ. ಈ ಹಿಂದೆ ಕುಡಿಯುವ ನೀರಿನ ಸಮಸ್ಯೆ ಬಹಳಷ್ಟಿತ್ತು. 15 ದಿನಗಳಿಗೊಮ್ಮೆ ನೀರು ದೊರೆಯುತ್ತಿತ್ತು. ಈ ಕೆರೆಯಿಂದ ದಿನದ 24 ಗಂಟೆಗಳ ಕಾಲ ಕುಡಿಯುವ ನೀರು ಸಿಗಲಿದೆ. ಜನ ಜಾನುವಾರುಗಳಿಗೆ ಕುಡಿಯುವ ನೀರು ಅತಿ ಅವಶ್ಯಕವಾಗಿದೆ. ಅಣ್ಣಿಗೇರಿ ಪಟ್ಟಣದ ಅಭಿವೃದ್ಧಿಗೆ ಹೆಚ್ಚಿನ ಅನುದಾನದ ನಿರೀಕ್ಷೆ ಇದೆ. ರೈತ ದೇಶದ ಬೆನ್ನೆಲುಬು. ಕೆರೆಗಾಗಿ ಭೂಮಿ ನೀಡಿದ ರೈತರಿಗೆ ಧನ್ಯವಾದ ತಿಳಿಸಲೇಬೇಕು ಎಂದರು.

ಮುಖಂಡರಾದ ಷಣ್ಮುಖ ಗುರಿಕಾರ ಮಾತನಾಡಿದರು.

ಈ ಸಂದರ್ಭದಲ್ಲಿ ಕೆರೆಗೆ ಭೂಮಿ ನೀಡಿದ ರೈತರನ್ನು ಸನ್ಮಾನಿಸಲಾಯಿತು.

ಅಣ್ಣಿಗೇರಿ ದಾಸೋಹ ಮಠದ ಸದ್ಗುರು ಶಿವಕುಮಾರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು.

ಇಮಾಮಸಾಬ ವಲ್ಲೆಪ್ಪನವರ ಮತ್ತು ಸಂಗಡಿಗರು ಡೊಳ್ಳಿನ ಪದಗಳನ್ನು ಹಾಡಿದರು.

ಶಾಸಕರಾದ ಎಸ್.ವಿ. ಸಂಕನೂರ, ಪ್ರದೀಪ ಶೆಟ್ಟರ, ಅಣ್ಣಿಗೇರಿ ಪುರಸಭೆ ಉಪಾಧ್ಯಕ್ಷೆ ಜಯಲಕ್ಷ್ಮಿ ಜಕರಡ್ಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಾಬಾಜಾನ ಮುಲ್ಲಾನವರ, ಭದ್ರಾಪೂರ ಗ್ರಾಮ ಪಂಚಾಯತ ಹಂಗಾಮಿ ಅಧ್ಯಕ್ಷ ವೀರಭದ್ರಪ್ಪ ಅಂಗಡಿ, ಹೊಸಳ್ಳಿ ಅಭಿನವ ಬೂದಿಶ್ವರ ಸ್ವಾಮೀಜಿ, ಅಡ್ನೂರಿನ ಅಭಿನವ ಪಂಚಾಕ್ಷರ ಸ್ವಾಮೀಜಿ, ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ, ಡಾ.ಎ.ಸಿ. ವಾಲಿ ಮಹಾರಾಜರು, ಅಣ್ಣಿಗೇರಿ ಪುರಸಭೆ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ಸುತ್ತಮುತ್ತಲಿನ ಗ್ರಾಮಗಳ ರೈತರು, ಸಾರ್ವಜನಿಕರು ಉಪಸ್ಥಿತರಿದ್ದರು.

ಭುವನೇಶ್ವರಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಅಣ್ಣಿಗೇರಿ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ನಿಡವಣಿ ಸ್ವಾಗತಿಸಿದರು.


Related Articles

Leave a Reply

Your email address will not be published. Required fields are marked *

Back to top button