ಧಾರಾವತಿ (ರಂಗ) ಮಾರುತಿ ಮಂದಿರಕ್ಕೆ: ಸಿಎಂ ಭೇಟಿ, ದರ್ಶನ!
…
ಗೊಕುಲ ಗ್ರಾಮ ಹುಬ್ಬಳ್ಳಿ
ಗ್ರಾಮದ ಶಾಲೆ ದತ್ತು ಪಡೆದ ಒಡೆಯ!
ಹುಬ್ಬಳ್ಳಿ ( ಕರ್ನಾಟಕ ವಾರ್ತೆ ) ಮೆ.15:
ಹನುಮಾನ್ ಚಾಲೀಸ್ ಓದಿದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಶ್ರದ್ಧೆ ಭಕ್ತಿಯಿಂದ ಆರಾಧನೆ ಮಾಡಿದರೆ ಹನುಮಂತ ಒಲಿಯುತ್ತಾನೆ. ಬೇಡಿಕೊಂಡವರಿಗೆ ಫಲ ಸಿಗಲಿದೆ.ಗೋಕುಲದ ಶಾಲೆಯನ್ನು ದತ್ತು ತೆಗೆದುಕೊಂಡಿದ್ದೇನೆ. ಈಗ ಪದವಿ ಪೂರ್ವ ತರಗತಿಗಳನ್ನು ಪ್ರಾರಂಭಿಸಲಾಗುವುದು. ಮುಂದಿನ ದಿನಗಳಲ್ಲಿ ಪದವಿ ತರಗತಿಗಳನ್ನು ಆರಂಭ ಮಾಡಲಾಗುವುದು. ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 100 ಕೋಟಿ ರೂ.ಮೀಸಲಿಡಲಾಗಿದೆ. ರೂಪ್ ವೇ, ಗಾಳಿ ಗೋಪುರ ನಿರ್ಮಾಣ ಮಾಡಲು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಧಾರವತಿ ಹನುಮಂತ ದೇವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಹನುಮಂತ ದೇವರ ಆಶೀರ್ವಾದ ಪಡೆದು, ನಂತರ ಅವರು ಮಾತನಾಡಿದರು.
ಹಳೆಯ ನೆನಪುಗಳು ಮನದಾಳದ ಸ್ಮರಣೆಯ ಪಟದಲ್ಲಿ ಬಂದು ಹೋಗುತ್ತಿವೆ. ಸಣ್ಣದಾಗಿದ್ದ ಹನುಮಂತ ದೇವಸ್ಥಾನವನ್ನು ದೊಡ್ಡದಾಗಿ ನಿರ್ಮಾಣ ಮಾಡಿರುವುದು ಹೆಮ್ಮೆ ಅನಿಸುತ್ತದೆ.
ಗೋಕುಲದ ಪ್ರತಿಯೊಂದು ಮನೆ ಮನೆಗೆ ಹೋಗಿದ್ದೇನೆ. ಸದಾಕಾಲ ಪ್ರೀತಿ ವಿಶ್ವಾಸ ಕೊಟ್ಟಿದ್ದಿರಿ. ಕಿರ್ಲೋಸ್ಕರ್ ಕಂಪನಿ ಬಂದ ಮೇಲೆ ಪ್ರತಿಯೊಬ್ಬರು ಕೆಲಸ ಮಾಡುತ್ತಿದ್ದರು. ಮಕ್ಕಳಿಗೆ ಒಳ್ಳೆಯ ವಿದ್ಯೆ ಕಲಿಸುವುದು ಬಹಳ ಮುಖ್ಯ. ಭೂಮಿ ಜಾಸ್ತಿ ಇದ್ದವರು ಇಡೀ ಜಗತ್ತನ್ನು ಆಳುತ್ತಿದ್ದರು. ದುಡ್ಡು ಇದ್ದ ಇಂಗ್ಲೆಂಡ್ ದೇಶ ಕೂಡ ಇಡೀ ಜಗತ್ತನ್ನು ಆಳಿದೆ. ಇಂದು ಜ್ಞಾನವಿದ್ದರು ವಿಶ್ವವನ್ನು ಆಳುತ್ತಿದ್ದಾರೆ. ಶಿಗ್ಗಾಂವ ಕ್ಷೇತ್ರದ ಜನರ ವಿಶ್ವಾಸ ತೀರಿಸಲು ಮುಂದಾಗುತ್ತೇನೆ. ಜನೋಪಯೋಗಿ ಶಾಸಕರು ರಾಜ್ಯಕ್ಕೆ ಬೇಕಾಗಿದ್ದಾರೆ. ಜೋಶಿ ಅವರ ಶ್ರಮದಿಂದ ಐಐಐಟಿ, ಬೈಪಾಸ್, ಸ್ಮಾರ್ಟ್ ಸಿಟಿ ಯೋಜನೆ ಸೇರಿದಂತೆ ಅನೇಕ ಯೋಜನೆಗಳು ಜಾರಿಗೆ ಬಂದಿವೆ. ರಾಜ್ಯ, ದೇಶ ಕಟ್ಟುವಲ್ಲಿ ನಿರತರಾಗಬೇಕು ಎಂದರು.
ಕೇಂದ್ರ ಸಂಸದೀಯ ವ್ಯವಹಾರಗಳ, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ, ಹನುಮಂತ ಚಿರಂಜೀವಿ. ಶ್ರೀರಾಮನಿಗಿಂತ ಹನುಮಂತ ಗುಡಿಗಳು ಜಾಸ್ತಿಯಿವೆ. ಮಂಕುತಿಮ್ಮನ ಕಗ್ಗದಲ್ಲಿ ಹನುಮಂತನ ಪವಾಡವನ್ನು ಸ್ಮರಿಸಲಾಗಿದೆ. ಹನುಮಂತನ ವ್ಯಾಕರಣವು ಶುದ್ಧ ವ್ಯಾಕರಣವಾಗಿತ್ತು. ಶ್ರೀರಾಮ ಹುಟ್ಟಿದ ಸ್ಥಳವಾದ ಅಯೋಧ್ಯೆಯಲ್ಲಿ ಪ್ರಧಾನಿ ಸಾಷ್ಟಾಂಗ ನಮಸ್ಕಾರ ಹಾಕಿದರು. ದೇಶದಲ್ಲಿ ಪರಿವರ್ತನೆ ಪರ್ವ ಆರಂಭವಾಗಿದೆ. ದ್ವಾದಶ ಜ್ಯೋತಿರ್ಲಿಂಗ ಮಂದಿರಕ್ಕೆ ರಾಷ್ಟ್ರಪತಿಗಳು ಭೇಟಿ ನೀಡಿದ್ದರು. ಕಾಶಿ ವಿಶ್ವನಾಥ ದೇವಸ್ಥಾನ ಅಭಿವೃದ್ಧಿಯಾಗಿದೆ. ದೇಶದಲ್ಲಿ ಹಿಂದೂಗಳ ಭಾವನೆಗಳಿಗೆ ಬೆಲೆಯಿದೆ. ಆಧ್ಯಾತ್ಮಿಕ ಜಾಗೃತಿ ಆಗುತ್ತಿದೆ. ಜಗತ್ತಿನ ಬೇರೆ ದೇಶಗಳಲ್ಲಿ ಸುಖ ಶಾಂತಿಯ ಕೊರತೆಯಿದೆ. ಮತ್ತೊಬ್ಬರಿಗಾಗಿ ಬದುಕುವ ಸಂಸ್ಕೃತಿ ನಮ್ಮ ದೇಶದಲ್ಲಿದೆ. ರಾಮನಿಗೆ ಸ್ಪೂರ್ತಿಯನ್ನು ಕೊಟ್ಟವರು ಹನುಮಂತ. ಇದು ಮುಂದಿನ ದಿನಗಳಲ್ಲಿ ಉತ್ತಮ ಸಂಸ್ಕಾರ ಕೇಂದ್ರವಾಗಲಿದೆ. ಭಾರತೀಯ ರೈಲ್ವೆಯ ರಾಮಾಯಣ ಸರ್ಕ್ಯೂಟ್ ರೈಲು ರಾಮಾಯಣದ ಸ್ಥಳಗಳಿಗೆ ಭೇಟಿ ನೀಡಲಿದೆ. ಹುಬ್ಬಳ್ಳಿ ಧಾರವಾಡ ನಡುವಿನ 10 ಪಥದ ಬೈಪಾಸ್ ರಸ್ತೆಗೆ ಟೆಂಡರ್ ಕರೆಯಲಾಗಿದೆ ಎಂದು ತಿಳಿಸಿದರು.
ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಧಾರವತಿ ಹನುಮಂತ ದೇವರು ಬೇಡಿಕೆ ಈಡೇರಿಸುವ ಶಕ್ತಿಯನ್ನು ಹೊಂದಿದೆ. ವಿಶಿಷ್ಟ ಮಹಿಮೆಯನ್ನು ಈ ದೇವಸ್ಥಾನ ಹೊಂದಿರುತ್ತದೆ. ಅನೇಕ ಪವಾಡಗಳು ನಡೆದಿವೆ ಎಂದರು.
ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆಚಾರ್ ಹಾಲಪ್ಪ ಬಸಪ್ಪ, ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ರಾಮಣ್ಣ ಬಡಿಗೇರ, ಶಂಕರ ಹೊಸಮನಿ, ಮಹಾದೇವಪ್ಪ ಪೂಜಾರ, ಮಲ್ಲಿಕಾರ್ಜುನ ಹೊರಕೇರಿ, ಬಸು ನಾಯ್ಕರ, ಪ್ರಕಾಶ ಕ್ಯಾರಕಟ್ಟಿ, ರಾಮಣ್ಣ ಉಣಕಲ್, ಮಂಜುನಾಥ ಉಣಕಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.