BREAKING NEWSCITY CRIME NEWSDHARWADHubballiPolicePolitical newsRainSand MafiyaTechTWINCITY

ಸಿದ್ಧಾರೂಢ ಮಠ ವ್ಯವಸ್ಥಾಪಕ ಅಮಾನತು: ಭಕ್ತರ ಹೋರಾಟಕ್ಕೆ ಜಯ!

POWER CITYNEWS:ಹುಬ್ಬಳ್ಳಿ /ಶ್ರೀ ಸಿದ್ಧಾರೂಢ ಮಠದ ವ್ಯವಸ್ಥಾಪಕ ಈರಣ್ಣ ತುಪ್ಪದ ಅವರ ಅಮಾನತು ಆದೇಶವು ಮಠದ ಭಕ್ತರ ದೀರ್ಘಕಾಲದ ಹೋರಾಟಕ್ಕೆ ಸಂದ ನ್ಯಾಯಯುತ ಜಯವಾಗಿದೆ ಎಂದು ಮಠದ ಹಿತರಕ್ಷಣಾ ಹೋರಾಟ ಸಮಿತಿಯ ಅಧ್ಯಕ್ಷ ಗುರುನಾಥ ಉಳ್ಳಿಕಾಶಿ ಹಾಗೂ ಕಾರ್ಯದರ್ಶಿ ನಾರಾಯಣ ವೈದ್ಯ ತಿಳಿಸಿದ್ದಾರೆ.
ಮಠದ ವ್ಯವಸ್ಥಾಪಕ ಈರಣ್ಣ ತುಪ್ಪದ ಅವರನ್ನು ತಕ್ಷಣವೇ ಅಮಾನತುಗೊಳಿಸುವಂತೆ ಹೋರಾಟ ಸಮಿತಿಯು ಮಠದ ಟ್ರಸ್ಟ್ ಕಮಿಟಿಯ ಮುಖ್ಯ ಆಡಳಿತಾಧಿಕಾರಿಯೂ ಆಗಿರುವ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಶ್ರೀಮತಿ ಬಿ.ಎಸ್. ಭಾರತಿ ಅವರಿಗೆ ಆಗ್ರಹಿಸಿತ್ತು. ಭಕ್ತರ ದೂರುಗಳು ಮತ್ತು ಆಗ್ರಹಗಳನ್ನು ಪರಿಗಣಿಸಿ ನ್ಯಾಯಾಧೀಶರು ಅಧಿಕೃತ ವಿಚಾರಣೆಗೆ ಆದೇಶ ಹೊರಡಿಸಿದ್ದಾರೆ.
ಏಪ್ರಿಲ್ 20ರಂದು ನಡೆದ ಟ್ರಸ್ಟ್ ಕಮಿಟಿಯ ಸಭೆಯ ಗೊತ್ತುವಳಿಯ ಆಧಾರದ ಮೇಲೆ ಈರಣ್ಣ ತುಪ್ಪದ ವಿರುದ್ಧ ಸಮಗ್ರ ತನಿಖೆ ನಡೆಸಿ ಒಂದು ತಿಂಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಆರೋಪಗಳಿಗೆ ಸಂಬಂಧಿಸಿದಂತೆ ತುಪ್ಪದ ಅವರು ನೀಡಿದ ಸಮಜಾಯಿಷಿ ತೃಪ್ತಿಕರವಾಗಿಲ್ಲವೆಂದು ಹೇಳಲಾಗಿದೆ.
ಈರಣ್ಣ ತುಪ್ಪದ ವಿರುದ್ಧ ಮಠದ ಸಿಬ್ಬಂದಿಗೆ ನಿಯಮಬಾಹಿರ ಬಡ್ತಿ ನೀಡಿರುವುದು, ಗೋಶಾಲೆಯ ಜಾನುವಾರುಗಳನ್ನು ಅನಧಿಕೃತವಾಗಿ ಮಾರಾಟ ಮಾಡಿರುವುದು, ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘಿಸಿರುವುದು, ಟ್ರಸ್ಟಿಗಳನ್ನು ಬ್ಲ್ಯಾಕ್‌ಮೇಲ್ ಮಾಡಿರುವುದು ಹಾಗೂ ಅಕ್ರಮ ಆಸ್ತಿ ಗಳಿಕೆ ಸೇರಿದಂತೆ ಹಲವು ಗಂಭೀರ ಆರೋಪಗಳು ಕೇಳಿಬಂದಿವೆ.
ಇದೇ ವೇಳೆ, ಅಮಾನತಿನ ಅವಧಿಯಲ್ಲಿ ಅವರನ್ನು ಬೇರೆ ಕಾರ್ಯಕ್ಕೆ ನಿಯೋಜಿಸಬೇಕಿದ್ದರೂ ಕಡ್ಡಾಯ ರಜೆಯ ಮೇಲೆ ಕಳುಹಿಸಿರುವ ಕ್ರಮ ಕಾನೂನುಬಾಹಿರವಾಗಿದೆ ಎಂದು ಹೋರಾಟ ಸಮಿತಿ ಆಕ್ಷೇಪಿಸಿದೆ. ಈ ಅವಧಿಯಲ್ಲಿ ಅವರಿಗೆ ವೇತನ ನೀಡಬಾರದು ಎಂದು ಸಮಿತಿ ಆಗ್ರಹಿಸಿದೆ.
ತನಿಖೆಯಲ್ಲಿ ವಿಳಂಬ ಅಥವಾ ತಪ್ಪಿತಸ್ಥರನ್ನು ರಕ್ಷಿಸುವ ಯತ್ನ ನಡೆದರೆ ಭಕ್ತರೊಂದಿಗೆ ಉಗ್ರ ಹೋರಾಟ ನಡೆಸುವುದಾಗಿ ಹೋರಾಟ ಸಮಿತಿಯ ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *