BREAKING NEWSL&TLife Style

ಗ್ರಾಹಕರ ಗಮನಕ್ಕೆ: ಇಂದಿನಿಂದ ‘ಗೃಹ ಜ್ಯೋತಿ’ ಮನೆ-ಮನೆ ತಪಾಸಣೆ.!

Dakhani

POWER CITYNEWS: HUBBALLI/ಮೀಟರ್ ರೀಡರ್‌ಗಳಿಗೆ ಸೂಕ್ತ ದಾಖಲೆ ನೀಡಿ ಸಹಕರಿಸಲು ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ವೈಶಾಲಿ ಎಂ.ಎಲ್ ಮನವಿ

ಹುಬ್ಬಳ್ಳಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ‘ಗೃಹ ಜ್ಯೋತಿ’ (GJY) ಯೋಜನೆಯ ಅರ್ಹ ಫಲಾನುಭವಿಗಳ ಮನೆ-ಮನೆ ಪರಿಶೀಲನೆ ಕಾರ್ಯ ಬುಧವಾರದಿಂದ (ಜುಲೈ 01, 2026) ಅಧಿಕೃತವಾಗಿ ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರು ಪರಿಶೀಲನೆಗೆ ಬರುವ ಸಿಬ್ಬಂದಿಗೆ ಅಗತ್ಯ ದಾಖಲೆಗಳನ್ನು ನೀಡಿ ಸಹಕರಿಸಬೇಕೆಂದು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) ಕೋರಿದೆ.

​2023ರ ಜುಲೈ ತಿಂಗಳಲ್ಲಿ ಜಾರಿಗೆ ಬಂದಿರುವ ಗೃಹ ಜ್ಯೋತಿ ಯೋಜನೆಯ ಅರ್ಹತೆಯನ್ನು ಮರುಪರಿಶೀಲಿಸುವ ಪ್ರಕ್ರಿಯೆ ಇದಾಗಿದೆ. ಹೆಸ್ಕಾಂನ ಮೀಟರ್ ರೀಡರ್‌ಗಳು ನೇರವಾಗಿ ಗ್ರಾಹಕರ ಮನೆಗಳಿಗೆ ಭೇಟಿ ನೀಡಿ, ಫಲಾನುಭವಿಗಳ ದಾಖಲೆಗಳನ್ನು ಪರಿಶೀಲಿಸಲಿದ್ದಾರೆ. ತದನಂತರ ಮೊಬೈಲ್ ಆ್ಯಪ್ ಹಾಗೂ ಘೋಷಣಾ ಪತ್ರದ ಮೂಲಕ ಗೃಹ ಜ್ಯೋತಿ ಫಲಾನುಭವಿಗಳ ಪರಿಶೀಲನಾ ಅರ್ಜಿ ಭರ್ತಿ ಪ್ರಕ್ರಿಯೆಯನ್ನು ಸ್ಥಳದಲ್ಲೇ ಪೂರ್ಣಗೊಳಿಸಲಿದ್ದಾರೆ.

​ಸೇವಾ ಸಿಂಧು ತಂತ್ರಾಂಶದಲ್ಲಿ ಮಾಹಿತಿ ಸಲ್ಲಿಕೆ:

​ಹೆಸ್ಕಾಂ ಸಿಬ್ಬಂದಿಯು ಮನೆ ಮಾಲೀಕರು ಅಥವಾ ಬಾಡಿಗೆದಾರರಿಂದ ಮಾಹಿತಿ ಪಡೆದು ಅದನ್ನು ನೇರವಾಗಿ ‘ಸೇವಾ ಸಿಂಧು’ ತಂತ್ರಾಂಶದಲ್ಲಿ ದಾಖಲಿಸಲಿದ್ದಾರೆ. ಪಡಿತರ ಚೀಟಿ (ರೇಷನ್ ಕಾರ್ಡ್) ಹೊಂದಿರುವವರು ಕಡ್ಡಾಯವಾಗಿ ಅದರ ವಿವರ ನೀಡಬೇಕು. ಎಪಿಎಲ್‌ (APL) ಕಾರ್ಡ್‌ ಇದ್ದರೆ ಅದರ ನಂಬರ್ ಅಥವಾ ಬಿಪಿಎಲ್‌ (BPL) ಕಾರ್ಡ್‌ ಇದ್ದರೆ ಅದರ ನಂಬರ್‌ನ್ನು ಸಿಬ್ಬಂದಿಗೆ ಒದಗಿಸಬೇಕಾಗುತ್ತದೆ. ಯಾವುದೇ ಕಾರ್ಡ್‌ ಇಲ್ಲದಿದ್ದರೆ, ಆ ಮಾಹಿತಿಯನ್ನೂ ಸ್ಪಷ್ಟವಾಗಿ ತಿಳಿಸಬೇಕು ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಸ್ಥಳದಲ್ಲೇ ಪರಿಶೀಲನೆ ಕಡ್ಡಾಯ: ಈ ಇಡೀ ಪ್ರಕ್ರಿಯೆಗೆ ಮೀಟರ್ ರೀಡರ್ ಮೂಲಕ ಸ್ಥಳದಲ್ಲೇ ಭೌತಿಕವಾಗಿ ಪರಿಶೀಲನೆ ಮಾಡುವುದು ಏಕೈಕ ಮಾರ್ಗವಾಗಿದೆ. ಹೀಗಾಗಿ ಸಾರ್ವಜನಿಕರು ಯಾವುದೇ ಗೊಂದಲಕ್ಕೊಳಗಾಗದೇ ಮೀಟರ್ ರೀಡರ್ ಗಳಿಗೆ ಸಂಪೂರ್ಣ ಸಹಕಾರ ನೀಡಬೇಕು.

​📌 ಪರಿಶೀಲನೆಗೆ ಅಗತ್ಯವಿರುವ ದಾಖಲೆಗಳು:

​ಹೆಸ್ಕಾಂ ಸಿಬ್ಬಂದಿ ಮನೆಗೆ ಭೇಟಿ ನೀಡಿದಾಗ ಫಲಾನುಭವಿಗಳು ಈ ಕೆಳಗಿನ ಮೂಲ ದಾಖಲೆಗಳನ್ನು ಅಥವಾ ಮಾಹಿತಿಯನ್ನು ಸಿದ್ಧವಾಗಿಟ್ಟುಕೊಳ್ಳಬೇಕಾಗಿ ವಿನಂತಿ:

  • ಆಧಾರ್ ಕಾರ್ಡ್
  • ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
  • ಮತದಾರರ ಗುರುತಿನ ಚೀಟಿ (ವೋಟರ್ ಐಡಿ)
  • ಪ್ಯಾನ್ ಕಾರ್ಡ್
  • ರೇಷನ್ ಕಾರ್ಡ್ (ಪಡಿತರ ಚೀಟಿ)
  • ಜಾತಿ ಪ್ರಮಾಣ ಪತ್ರ
  • ಬಾಡಿಗೆ ಒಪ್ಪಂದದ ಪತ್ರಗಳು (ಬಾಡಿಗೆದಾರರಿಗೆ ಮಾತ್ರ ಅನ್ವಯಿಸುತ್ತದೆ)

​⚡ ಹುಬ್ಬಳ್ಳಿಯಲ್ಲಿ ಹೆಸ್ಕಾಂ ಎಂಡಿ ವೈಶಾಲಿ ಎಂ.ಎಲ್‌ ಅವರಿಂದ ದಿಢೀರ್ ಭೇಟಿ!

​ಸರ್ಕಾರದ ಆದೇಶದನ್ವಯ ಗೃಹಜ್ಯೋತಿ ಫಲಾನುಭವಿಗಳ ಪರಿಶೀಲನಾ ಕಾರ್ಯ ಹೆಸ್ಕಾಂ ವ್ಯಾಪ್ತಿಯಲ್ಲಿ ಚುರುಕಿನಿಂದ ಸಾಗಿದ್ದು, ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ವೈಶಾಲಿ ಎಂ.ಎಲ್‌ ಅವರು ಬುಧವಾರ ಹುಬ್ಬಳ್ಳಿಯ ವಿವಿಧ ವಾರ್ಡ್‌ ಹಾಗೂ ಬಡಾವಣೆಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮನೆ-ಮನೆಗೆ ತೆರಳಿ ನಡೆಯುತ್ತಿದ್ದ ಪ್ರಕ್ರಿಯೆಯನ್ನು ವೀಕ್ಷಿಸಿದ ಅವರು, ಫಲಾನುಭವಿಗಳ ಪರಿಶೀಲನಾ ಕಾರ್ಯವನ್ನು ಯಾವುದೇ ಲೋಪದೋಷಗಳಿಲ್ಲದೆ ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಸ್ಥಳದಲ್ಲಿದ್ದ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

Related Articles

Leave a Reply

Your email address will not be published. Required fields are marked *