ಶಿಕ್ಷಣಕ್ಕೆ ಮತ್ತೊಂದು ಹೆಜ್ಜೆ ಶಾಲೆಯ ನೂತನ ಕಟ್ಟಡಕ್ಕೆ ಶೀಘ್ರ ಚಾಲನೆ : MLC ಜಕ್ಕಪ್ಪನವರ್!
Raja Dakgani

POWER CITYNEWS: HUBBALLI
ಧಾರವಾಡ : ಜಿಲ್ಲೆಯ ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಗ್ರಾಮದಲ್ಲಿ ಡಾ. ಅಂಬೇಡ್ಕರ್ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ನೂತನ ಕಟ್ಟಡ ನಿರ್ಮಿಸಲು ಒಪ್ಪಿಗೆ ನೀಡಿರುವ ವಿಧಾನ ಪರಿಷತ್ ಸದಸ್ಯ ಜಕ್ಕಪ್ಪ ಕಲ್ಲಪ್ಪನವರ್ ಅವರನ್ನು ಸಂಸ್ಥೆಯ ಆಡಳಿತ ಮಂಡಳಿ, ಶಾಲೆಯ ಸಿಬ್ಬಂದಿ ಹಾಗೂ ಗ್ರಾಮದ ಮುಖಂಡರು ಭಾನುವಾರ (ಜು. 19) ಹುಬ್ಬಳ್ಳಿಯ ಅವರ ನಿವಾಸದಲ್ಲಿ ಸನ್ಮಾನಿಸಿದರು.

ಶಾಲೆಗೆ ನೂತನ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಶ್ರಾವಣ ಮಾಸದಲ್ಲಿ ಭೂಮಿಪೂಜೆ ನೆರವೇರಿಸಲು ತಾವೇ ಆಗಮಿಸುವುದಾಗಿ ಹಾಗೂ ಬಳಿಕ ಕಟ್ಟಡ ಕಾಮಗಾರಿಯನ್ನು ಆರಂಭಿಸುವುದಾಗಿ ಜಕ್ಕಪ್ಪ ಕಲ್ಲಪ್ಪನವರ್ ಭರವಸೆ ನೀಡಿದರು ಎಂದು ಸಂಸ್ಥೆಯ ಪ್ರತಿನಿಧಿಗಳು ತಿಳಿಸಿದ್ದಾರೆ.
ಬೆಳಿಗ್ಗೆ 10.30ಕ್ಕೆ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರು, ಶಾಲೆಯ ಸಿಬ್ಬಂದಿ ವರ್ಗ ಹಾಗೂ ಗ್ರಾಮದ ಮುಖಂಡರು ಭಾಗವಹಿಸಿ, ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡುತ್ತಿರುವ ಸಹಕಾರವನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ, ಜಕ್ಕಪ್ಪ ಕಲ್ಲಪ್ಪನವರ್ ಅವರು ಇನ್ನಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡುವಂತಾಗಲಿ ಎಂದು ದೇವರು ಅವರಿಗೆ ಉತ್ತಮ ಆರೋಗ್ಯ, ಆಯುಷ್ಯ ಹಾಗೂ ಶಕ್ತಿ ನೀಡಲಿ ಎಂದು ಉಪಸ್ಥಿತರು ಹಾರೈಸಿದರು.



