“ಜು. 21ರಿಂದ ಗಾಳಿ ದುರ್ಗಮ್ಮ ಜಾತ್ರೆ: ಭಕ್ತರ ಸ್ವಾಗತಕ್ಕೆ ಭರ್ಜರಿ ಸಿದ್ಧತೆ!
Raja Dakhani

POWER CITYNEWS : HUBBALLIಹುಬ್ಬಳ್ಳಿ, ಜು. 17: ಹುಬ್ಬಳ್ಳಿಯ ಆರಾಧ್ಯ ಗ್ರಾಮದೇವತೆಯಾದ ಶ್ರೀ ಗಾಳಿ ದುರ್ಗಮ್ಮ ತಾಯಿಯ ಭಂಡಾರ ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನ ಸಮಿತಿಯಿಂದ ಪೂರ್ವಭಾವಿ ಸಭೆ ನಡೆಯಿತು.
ದೇವಸ್ಥಾನದ ಅಧ್ಯಕ್ಷ ಸಂತೋಷ್ ಲಕ್ಷ್ಮಣ ಹಿರೇಕೆರೂರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷ ಶಿವಣ್ಣ ಯಲ್ಲಪ್ಪ ಹಿರೇಕೆರೂರ, ಹಿರಿಯರಾದ ಯಲ್ಲಮ್ಮ ಲಕ್ಷ್ಮಣ ಹಿರೇಕೆರೂರ, ಪ್ರಭು ಯಲ್ಲಪ್ಪ ಹಿರೇಕೆರೂರ ಸೇರಿದಂತೆ ದೇವಸ್ಥಾನ ಸಮಿತಿ ಸದಸ್ಯರು, ಸೇವಾ ಯುವಕ ಮಂಡಳಿ, ವೀರ ಮಾರುತಿ ಯುವಕರ ಬಳಗ ಹಾಗೂ ಹೊಸೂರಿನ ಗುರು-ಹಿರಿಯರು ಮತ್ತು ಭಕ್ತರು ಭಾಗವಹಿಸಿದ್ದರು.

ಸಭೆಯಲ್ಲಿ ಜುಲೈ 21ರಿಂದ ಆಗಸ್ಟ್ 4ರವರೆಗೆ ನಡೆಯಲಿರುವ ವಾರ ಹಿಡಿಯುವ ಕಾರ್ಯಕ್ರಮ ಹಾಗೂ ಆಗಸ್ಟ್ 4ರಂದು ನಡೆಯಲಿರುವ ಭಂಡಾರ ಜಾತ್ರಾ ಮಹೋತ್ಸವದ ಸಿದ್ಧತೆಗಳ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು. ವಿವಿಧ ಜಿಲ್ಲೆಗಳು ಹಾಗೂ ರಾಜ್ಯಗಳಿಂದ ಆಗಮಿಸುವ ಸಾವಿರಾರು ಭಕ್ತರಿಗೆ ಸುಗಮ ದರ್ಶನ, ಮೂಲಭೂತ ಸೌಲಭ್ಯ, ಕುಡಿಯುವ ನೀರು, ಸ್ವಚ್ಛತೆ ಸೇರಿದಂತೆ ಅಗತ್ಯ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಲಾಯಿತು.
ಪ್ರತಿ ದಿನ ಸಂಜೆ 8.30ಕ್ಕೆ ಭಕ್ತರಿಗೆ ಪ್ರಸಾದ ವಿತರಣೆ, ಬಳಿಕ ದೇವಾಲಯ ಹಾಗೂ ಸುತ್ತಮುತ್ತಲಿನ ಪ್ರದೇಶದ ಸ್ವಚ್ಛತೆ ಕಾಪಾಡುವುದು, ಭಂಡಾರ ಉತ್ಸವ ಹಾಗೂ ಪಲ್ಲಕ್ಕಿ ಉತ್ಸವವನ್ನು ಪಾರಂಪರಿಕ ಸಂಪ್ರದಾಯದಂತೆ ವಿಜೃಂಭಣೆಯಿಂದ ನಡೆಸುವ ಕುರಿತು ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.
ಸುಮಾರು 46 ವರ್ಷಗಳ ಹಿಂದೆ ಹಿರಿಯರ ನೇತೃತ್ವದಲ್ಲಿ ಆರಂಭಗೊಂಡ ಈ ಜಾತ್ರಾ ಮಹೋತ್ಸವವನ್ನು ಅಂದಿನಿಂದ ಇಂದಿನವರೆಗೂ ಸಂಪ್ರದಾಯಬದ್ಧವಾಗಿ ನಡೆಸಿಕೊಂಡು ಬರಲಾಗುತ್ತಿದ್ದು, ಈ ಬಾರಿಯೂ ಭಕ್ತಿಭಾವದಿಂದ ಆಚರಿಸಲು ದೇವಸ್ಥಾನ ಸಮಿತಿ ಸಕಲ ಸಿದ್ಧತೆ ಕೈಗೊಂಡಿದೆ.

ಈ ಸಂದರ್ಭದಲ್ಲಿ ಜಾತ್ರೆಯ ಮಹತ್ವ ಹಾಗೂ ವೈಶಿಷ್ಟ್ಯವನ್ನು ಜನರಿಗೆ ತಲುಪಿಸಲು ಮಾಧ್ಯಮಗಳ ಸಹಕಾರವನ್ನು ದೇವಸ್ಥಾನ ಸಮಿತಿ ಕೋರಿದೆ.
ವಾರ ಹಿಡಿಯುವ ಕಾರ್ಯಕ್ರಮದ ದಿನಾಂಕಗಳು:
ಜುಲೈ 21 (ಮಂಗಳವಾರ) – ಮೊದಲನೇ ವಾರ
ಜುಲೈ 24 (ಶುಕ್ರವಾರ) – ಎರಡನೇ ವಾರ
ಜುಲೈ 28 (ಮಂಗಳವಾರ) – ಮೂರನೇ ವಾರ
ಜುಲೈ 31 (ಶುಕ್ರವಾರ) – ನಾಲ್ಕನೇ ವಾರ
ಆಗಸ್ಟ್ 4 (ಮಂಗಳವಾರ) – ಐದನೇ ವಾರ ಹಾಗೂ ಭಂಡಾರ ಜಾತ್ರಾ ಮಹೋತ್ಸವ
ದೇವಸ್ಥಾನ ಸಮಿತಿಯು ವಾರದ ದಿನಗಳಲ್ಲಿ ಸಂಪ್ರದಾಯದಂತೆ ತೆಂಗಿನಕಾಯಿ ಒಡೆಯದಿರುವುದು ಹಾಗೂ ಕೆಲವು ಆಚರಣೆಗಳನ್ನು ಭಕ್ತಿಯಿಂದ ಪಾಲಿಸುವಂತೆ ಭಕ್ತರಿಗೆ ಮನವಿ ಮಾಡಿದ್ದು, ಕುಟುಂಬ ಸಮೇತರಾಗಿ ಜಾತ್ರೆಯಲ್ಲಿ ಭಾಗವಹಿಸಿ ದೇವಿಯ ಆಶೀರ್ವಾದ ಪಡೆಯುವಂತೆ ಆಹ್ವಾನಿಸಿದೆ.
RAJA DAKHANI (POWER CITYNEWS)



