ಸ್ಥಳೀಯ ಸುದ್ದಿ

ಧಾರವಾಡ ಗ್ರಾಮೀಣದತ್ತ ಇಡೀ ರಾಜ್ಯದ ಚಿತ್ತ, ವಿನಯ್ ಕುಲಕರ್ಣಿಗೆ ಈ ಬಾರಿ ವಿಜಯದ ಮಾಲೆ: ಮಾಜಿ ಸಿಎಂ ಶೆಟ್ಟರ್

ಧಾರವಾಡ

ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಪರ ಕ್ಷೇತ್ರದ ವಿವಿಧೆಡೆಗಳಲ್ಲಿ ಬಿರುಸಿನ ಪ್ರಚಾರ ನಡೆಯಿತು.

ಧಾರವಾಡದ ಹೆಬ್ಬಳ್ಳಿ ಅಗಸಿಯಿಂದ ಹೊಸಯಲ್ಲಾಪುರದವರೆಗೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು, ಭರ್ಜರಿ ರೋಡ್ ಶೋ ನಡೆಸುವ ಮೂಲಕ ವಿನಯ್ ಕುಲಕರ್ಣಿ ಪರ ಮತಯಾಚನೆ ಮಾಡಿದರು.

ಜಗದೀಶ ಶೆಟ್ಟರ್, ವಿನಯ್ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ, ತವನಪ್ಪ ಅಷ್ಟಗಿ, ಅರವಿಂದ ಏಗನಗೌಡರ ಸೇರಿದಂತೆ ಅನೇಕರು ತೆರೆದ ವಾಹನದ ಮೂಲಕ ರೋಡ್ ಶೋ ನಡೆಸಿ ವಿನಯ್ ಕುಲಕರ್ಣಿ ಬೆಂಬಲಿಸುವಂತೆ ಮನವಿ ಮಾಡಿದರು.

ಈ ವೇಳೆ ಮಾತನಾಡಿದ ಜಗದೀಶ ಶೆಟ್ಟರ್, ಇದೀಗ ಇಡೀ ರಾಜ್ಯದ ಚಿತ್ತ ಧಾರವಾಡ ಗ್ರಾಮೀಣ ಕ್ಷೇತ್ರದತ್ತ ನೆಟ್ಟಿದೆ. ಬಿಜೆಪಿ ಷಡ್ಯಂತ್ರ ಮಾಡಿ ವಿನಯ್ ಕುಲಕರ್ಣಿ ಅವರನ್ನು ಕ್ಷೇತ್ರದ ಹೊರಗಡೆ ಇಟ್ಟಿರಬಹುದು ಆದರೆ, ಅವರು ಕ್ಷೇತ್ರದ ಜನರ ಹೃದಯದಲ್ಲಿ ಮನೆ ಮಾಡಿದ್ದಾರೆ. ಇಂದು ಕ್ಷೇತ್ರದೆಲ್ಲೆಡೆ ವಿನಯ್ ಕುಲಕರ್ಣಿ ಅವರ ಪರವಾಗಿಯೇ ಅಲೆ ಇದೆ. ಬೆಳೆಯುತ್ತಿರುವ ನಾಯಕನನ್ನು ತುಳಿಯಬೇಕು ಎಂಬ ಹುನ್ನಾರ ನಡೆದಿದೆ. ಅದಕ್ಕೆ ಯಾರೂ ಹೆದರುವ ಅಗತ್ಯವಿಲ್ಲ. ಕಷ್ಟಪಟ್ಟು ಬೆಳೆದವರು ವಿನಯ್ ಕುಲಕರ್ಣಿ. ವಿನಯ್ ಅವರು ಈ ಹಿಂದೆ ಸಚಿವರಿದ್ದ ಸಮಯದಲ್ಲಿ ಮಾಡಿದ ಜನಪರ ಕೆಲಸಗಳನ್ನು ಇಂದಿಗೂ ಜನ ನೆನಪಿಸಿಕೊಳ್ಳುತ್ತಿದ್ದಾರೆ ಎಂದರು.
ಈ ಬಾರಿ ವಿನಯ್ ಕುಲಕರ್ಣಿ ಗೆಲುವು ನಿಶ್ಚಿತ. ವಿನಯ್ ಕ್ಷೇತ್ರದ ಹೊರಗಿದ್ದರೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ. ಇದು ದಾಖಲೆಯಾಗುತ್ತದೆ. ವಿನಯ್ ಅವರ ಬೆಂಬಲಿಗರು ಹೆಚ್ಚೆಚ್ಚು ಪ್ರಚಾರ ಮಾಡಿ ಅವರನ್ನು ಗೆಲ್ಲಿಸುವ ಜವಾಬ್ದಾರಿ ಹೊತ್ತುಕೊಳ್ಳಬೇಕು ಎಂದರು.

ಶಿವಲೀಲಾ ಕುಲಕರ್ಣಿ ಮಾತನಾಡಿ, ಇಲ್ಲಿ ವಿನಯ್ ಕುಲಕರ್ಣಿ ಅವರು ಕಾಲಿಡದೇ ಇದ್ದರೂ ಪ್ರತಿಯೊಬ್ಬ ಕಾರ್ಯಕರ್ತ ಕೂಡ ನಾನೇ ವಿನಯ್ ಕುಲಕರ್ಣಿ ಎಂದು ಪ್ರಚಾರ ಮಾಡುತ್ತಿರುವುದನ್ನು ನೋಡಿದರೆ ಅತ್ಯಂತ ಸಂತೋಷವೆನಿಸುತ್ತಿದೆ. ಇಂದು ಕ್ಷೇತ್ರದಲ್ಲೆಡೆ ನಮ್ಮ ಕುಟುಂಬಕ್ಕೆ ಸಾಕಷ್ಟು ಪ್ರೀತಿ ಸಿಗುತ್ತಿದೆ ಅಷ್ಟೇ ಬೆಂಬಲ ಕೂಡ ವ್ಯಕ್ತವಾಗುತ್ತಿದೆ. ಬಿಜೆಪಿಯವರು ಎಷ್ಟೇ ಷಡ್ಯಂತ್ರ ಮಾಡಿದರೂ ಈ ಬಾರಿಯ ಗೆಲುವು ನಮ್ಮ ಕಾಂಗ್ರೆಸ್ ಕಾರ್ಯಕರ್ತರ ಗೆಲುವಾಗುತ್ತದೆ. ಈ ಗೆಲುವು ಇತಿಹಾಸದಲ್ಲಿ ದಾಖಲಾಗುತ್ತದೆ ಎಂದರು.

 ಈ ಸಂಧರ್ಭದಲ್ಲಿ ಪ್ರಕಾಶ ಗಾಟಗೆ,ಪಾಲಿಕೆ ಸದಸ್ಯೆ ದೀಪಾ ನೀರಲಕಟ್ಟಿ,ಸಂಜೀವ ಲಕಮನಹಳ್ಳಿ,ಅಜ್ಜಪ್ಪ ಗುಲಾಲದವರ,ಆನಂದ ಶಿಂಗನಾಥ,ನವೀನ ಕದಮ,ನಾರಾಯಣ ಸುಳ್ಳದ ಸೇರಿದಂತೆ ಅಪಾರ ಕಾರ್ಯಕರ್ತರು ಉಪಸ್ಥಿತರಿದ್ದರು.

ಧಾರವಾಡದಲ್ಲಿ ನಡೆದ ಜಗದೀಶ ಶೆಟ್ಟರ್ ರೋಡ್ ಶೋಗೂ ಮುನ್ನ ಶಿವಲೀಲಾ ಕುಲಕರ್ಣಿ ಅವರು ಅಪಾರ ಜನಬೆಂಬಲದೊಂದಿಗೆ ಧಾರವಾಡ ತಾಲೂಕಿನ ಶಿಂಗನಹಳ್ಳಿ ಗ್ರಾಮದಲ್ಲೂ ಭರ್ಜರಿ ಪ್ರಚಾರ ನಡೆಸಿದರು. ಶಿಂಗನಹಳ್ಳಿ ಗ್ರಾಮದಲ್ಲಿ ಶಿವಲೀಲಾ ಅವರಿಗೆ ಅಭೂತಪೂರ್ವ ಜನಬೆಂಬಲ ವ್ಯಕ್ತವಾಯಿತು. ಇತ್ತ ತಾಲೂಕಿನ ಗೋವನಕೊಪ್ಪ ಗ್ರಾಮದಲ್ಲಿ ವಿನಯ್ ಕುಲಕರ್ಣಿ ಅವರ ಪುತ್ರಿ ವೈಶಾಲಿ ಕುಲಕರ್ಣಿ ಕೂಡ ಅಬ್ಬರದ ಪ್ರಚಾರ ನಡೆಸಿದರು. ಮನೆ, ಮನೆಗೆ ತೆರಳಿ ಮತಯಾಚನೆ ಮಾಡುವ ಮೂಲಕ ಬಿರುಸಿನ ಪ್ರಚಾರ ನಡೆಸಿದರು.

Related Articles

Leave a Reply

Your email address will not be published. Required fields are marked *

Back to top button