ಸ್ಥಳೀಯ ಸುದ್ದಿ

ನಿಮ್ಮ ಅಪ್ಪಾರ ಬಂದಿದ್ದಕ್ಕಿಂತ ಹೆಚ್ಚಾತು.. ನಾವು ನಿಮಗ ವೋಟ್ ಹಾಕ್ತೇವಿ ಚಿಂತಿ ಮಾಡಬ್ಯಾಡ್ರಿ

ಧಾರವಾಡ

ನೀವು ಇವತ್ತ ನಮ್ಮ ಮನಿ ಬಾಗಿಲಿಗಿ ಬಂದೀರಿ, ನಿಮ್ಮ ಅಪ್ಪಾರ ಬಂದಿದ್ದಕ್ಕಿಂತ ಹೆಚ್ಚಾತು ನಾವು ನಿಮಗ ವೋಟ್ ಹಾಕ್ತೇವಿ ಚಿಂತಿ ಮಾಡಬ್ಯಾಡ್ರಿ ಅನ್ನೋ ಅಭಯ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಅವರ ಪುತ್ರಿ ವೈಶಾಲಿ ಕುಲಕರ್ಣಿ ಅವರಿಗೆ ಸಿಕ್ಕಿದೆ.

ಹೌದು! ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಅವರ ಪರವಾಗಿ ಅವರ ಪುತ್ರಿ ವೈಶಾಲಿ ಅವರು ಧಾರವಾಡ ತಾಲೂಕಿನ ತಲವಾಯಿ ಗ್ರಾಮದಲ್ಲಿ ತಮ್ಮ ತಂದೆ ಪರ ಬಿರುಸಿನ ಪ್ರಚಾರ ನಡೆಸಿದರು.

ತಲವಾಯಿ ಗ್ರಾಮದಲ್ಲಿ ಹಿರಿಯರು ಹಾಗೂ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಮನೆ, ಮನೆಗೆ ತೆರಳಿ ಕರಪತ್ರ ನೀಡಿ ತಮ್ಮ ತಂದೆ ವಿನಯ್ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು. ವೈಶಾಲಿ ಅವರು ತಲವಾಯಿ ಗ್ರಾಮದ ಮನೆಯೊಂದಕ್ಕೆ ಹೋಗಿ ನಮ್ಮ ತಂದೆಯವರು ಬರಲು ಆಗಿಲ್ಲ ಅದಕ್ಕೆ ನಾವೇ ಬಂದು ಮತ ಕೇಳುತ್ತಿದ್ದೇವೆ ನಮಗೆ ಮತ ನೀಡಿ ಎಂದು ಮನವಿ ಮಾಡಿದರು. ಮಹಿಳೆಯೊಬ್ಬರು ನಿಮ್ಮ ತಂದೆ ಬಂದಿದ್ದಕ್ಕಿಂತ ಹೆಚ್ಚಾಯ್ತು ನಾವು ನಿಮಗೇ ಮತ ಹಾಕ್ತೀವಿ ಅಂತಾ ಅಭಯ ನೀಡಿದರು.

ಈ ವೇಳೆ ಮಾತನಾಡಿದ ವೈಶಾಲಿ ಕುಲಕರ್ಣಿ, ಈ ಬಾರಿ ನಮ್ಮ ತಂದೆಯವರಾದ ವಿನಯ್ ಕುಲಕರ್ಣಿ ಅವರು 50 ಸಾವಿರ ಮತಗಳ ಅಂತರದಿಂದ ಗೆದ್ದೇ ಗೆಲ್ಲುತ್ತಾರೆ. ಅದರಲ್ಲಿ ಯಾವುದೇ ಸಂದೇಹವಿಲ್ಲ. ನಾವು ಹೋದ ಕಡೆಗಳಲ್ಲೆಲ್ಲ ಉತ್ತಮ ಜನ ಬೆಂಬಲ ವ್ಯಕ್ತವಾಗುತ್ತಿದೆ. ಹಿರಿಯರು ಪಕ್ಷದ ಕಾರ್ಯಕರ್ತರಿಂದ ಉತ್ತಮ ಜನಸ್ಪಂದನೆ ಸಿಗುತ್ತಿದೆ. ನಮ್ಮ ತಂದೆಯವರು ಸಚಿವರಿದ್ದ ಸಂದರ್ಭದಲ್ಲಿ ಪ್ರತಿ ತಿಂಗಳು ಉದ್ಯೋಗ ಮೇಳ ಮಾಡಿ ಯುವಕರಿಗೆ ಉದ್ಯೋಗ ಕೊಡಿಸುವ ಕೆಲಸ ಮಾಡುತ್ತಿದ್ದರು. ಅಂತಹ ಕೆಲಸಗಳು ಬಿಜೆಪಿ ಶಾಸಕರ ಅವಧಿಯಲ್ಲಿ ಆಗಲಿಲ್ಲ ಎಂದರು.

ಒಟ್ಟಾರೆ ವೈಶಾಲಿ ಕೂಡ ತಮ್ಮ ತಂದೆ ಪರವಾಗಿ ಬಿರುಸಿನ ಪ್ರಚಾರ ನಡೆಸಿದ್ದು, ಅವರಿಗೂ ಉತ್ತಮ ಜನ ಸ್ಪಂದನೆ ವ್ಯಕ್ತವಾಗಿದೆ.

Related Articles

Leave a Reply

Your email address will not be published. Required fields are marked *

Back to top button