ಸ್ಥಳೀಯ ಸುದ್ದಿ

ಶ್ರೀ ಗವಿಸಿದ್ದೇಶ್ಚರ ಜಾತ್ರೆ- ಡಿಸಿ, ಎಸ್ಪಿ ಅವರಿಂದ ಜಾತ್ರೋತ್ಸವ ಸಿದ್ಧತೆ ಪರಿಶೀಲನೆ

ಕೊಪ್ಪಳ

ಐತಿಹಾಸಿಕ ಶ್ರೀ ಕೊಪ್ಪಳ ಗವಿಸಿದ್ದೇಶ್ವರ ಜಾತ್ರೋತ್ಸವ ಸಿದ್ಧತೆಯನ್ನು ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ಅರುಣಾಂಕ್ಷು ಗಿರಿ ಅವರು ಮಠದ ಆವರಣಕ್ಕೆ ತೆರಳಿ ಪರಿಶೀಲಿಸಿದರು.


ಶ್ರೀ ಅಭಿನವ ಗವಿಸಿದ್ದೇಶ್ವರ ಶ್ರೀಗಳ ಸಮ್ಮುಖದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮೊದಲಿಗೆ ಮಠದ ಒಳಾಂಗಣದಲ್ಲಿ ಭಕ್ತರಿಗೆ ಏರ್ಪಾಡು ಮಾಡಿರುವ ವ್ಯವಸ್ಥೆಯನ್ನು ಪರಿಶೀಲಿಸಿದರು. ಬಳಿಕ ಅನ್ನದಾಸೋಹ ನಡೆಯುವ ಸ್ಥಳಕ್ಕೆ ತೆರಳಿ ಕೌಂಟರ್ ಮೂಲಕ ಏರ್ಪಾಡು ಮಾಡಿದ ಪ್ರಸಾದ ವಿತರಣೆಯ ವ್ಯವಸ್ಥೆಯನ್ನು ಪರಿಶೀಲಿಸಿದರು.

ಮಠದ ಎದುರಿನ ಬಯಲು ಆವರಣಕ್ಕೆ ತೆರಳಿ, ಅಲ್ಲಿ ನಾನಾ ಅಂಗಡಿಗಳನ್ನು ಹಾಕಲು ಏರ್ಪಾಡು ಮಾಡಿದ ವ್ಯವಸ್ಥೆಯನ್ನು ಪರಿಶೀಲಿಸಿದರು.

ಜಾತ್ರೆಗೆ ಸಂಬಂಧಿಸಿದಂತೆ ಈಗಾಗಲೇ ಸಭೆಗಳನ್ನು ನಡೆಸಿ ಅಧಿಕಾರಿಗಳಿಗೆ ಹಲವಾರು ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಅದರಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು, ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಪ್ರಸಾದ ಸಿದ್ದಗೊಳಿಸುವ ಸ್ಥಳದಲ್ಲಿ ಮತ್ತು ಇನ್ನೀತರ ಜನನಿಬಿಡ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಬೇಕು. ಈ ಕುರಿತು ಅಧಿಕಾರಿಗಳು ಸಮರ್ಪಕ ಮೇಲ್ವಿಚಾರಣೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ತೇರು ಸಾಗುವ ಮಾರ್ಗದಲ್ಲಿ ಬರುವ ಅಪಾಯಕಾರಿ ವಿದ್ಯುತ್ ತಂತಿಗಳನ್ನು ತೆರವುಗೊಳಿಸಲು ಇದೆ ವೇಳೆ ಜಿಲ್ಲಾಧಿಕಾರಿಗಳು ಜೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಾತ್ರೆಗೆ ಸಂಬಂಧಿಸಿದಂತೆ ಈಗಾಗಲೇ ಅಗತ್ಯ ಸಂಖ್ಯೆಯಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಿ ಜಾತ್ರೆಯು ಸುವ್ಯವಸ್ಥಿತವಾಗಿ ನಡೆಯುವಂತೆ ನೋಡಿಕೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅರುಣಾಂಕ್ಷು ಗಿರಿ ಅವರು ತಿಳಿಸಿದರು.

ಈ ವೇಳೆ ಸಹಾಯಕ ಆಯುಕ್ತರಾದ ಬಸವಣ್ಣೆಪ್ಪ ಕಲಶೆಟ್ಟಿ, ಡಿವೈಎಸ್ಪಿ ಶರಣಬಸಪ್ಪ ಸುಬೇದಾರ, ಗವಿಮಠ ಸಂಸ್ಥಾನದ ಆಡಳಿತಾಧಿಕಾರಿಗಳು, ಮಠದ ಇನ್ನೀತರ ಭಕ್ತರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *