BidarBody buildersCITY CRIME NEWS

ಮುಖ್ಯ ಶಿಕ್ಷಕರ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿ ಆತ್ಮ ಹತ್ಯೆ. .!?

Power CityNews

POWER CITYNEWS:HUBBALLI/ಬೀದರ್:

ಶಿಕ್ಷಣ ಸಂಸ್ಥೆಯೊಂದರಲ್ಲಿ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಭೀಕರ ಘಟನೆಯೊಂದು ಬೀದರ್‌ನ ಪ್ರತಾಪ್ ನಗರದ ಬಳಿ ಇಂದು (ಜೂನ್ 10) ಮುಂಜಾನೆ ನಡೆದಿದೆ. ಮುಖ್ಯ ಶಿಕ್ಷಕರ ಮಾನಸಿಕ ಕಿರುಕುಳಕ್ಕೆ ಬೇಸತ್ತು 16 ವರ್ಷದ ವಿದ್ಯಾರ್ಥಿ ಶಾಲಾ ಕಟ್ಟಡದ 4ನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.

ಸಮೀರ್ (16) ಸಾವನ್ನಪ್ಪಿದ ದುರ್ದೈವಿ ವಿದ್ಯಾರ್ಥಿ. ಈತ ಪ್ರತಾಪ್ ನಗರದ ಬಳಿಯ ಖಾಸಗಿ ಶಾಲೆಯೊಂದರಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಇಂದು ಬೆಳಗ್ಗೆ ಎಂದಿನಂತೆ ಶಾಲೆಗೆ ಹೋಗಿದ್ದ ಸಮೀರ್, ದಿಢೀರನೆ ಶಾಲಾ ಕಟ್ಟಡದ ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾನೆ.

ಶಾಲಾ ಆಡಳಿತ ಮಂಡಳಿಯ ನಡೆ ಮೇಲೆ ಮೂಡಿದ ಅನುಮಾನ!

ವಿದ್ಯಾರ್ಥಿ ಮಹಡಿಯಿಂದ ಬಿದ್ದು ಮೃತಪಡುತ್ತಿದ್ದಂತೆಯೇ ಶಾಲಾ ಆಡಳಿತ ಮಂಡಳಿ ನಡೆದುಕೊಂಡ ರೀತಿ ಈಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮಗು ಆತ್ಮಹತ್ಯೆ ಮಾಡಿಕೊಂಡ ವಿಷಯವನ್ನು ಪೋಷಕರಿಗೆ ತಕ್ಷಣವೇ ತಿಳಿಸದ ಆಡಳಿತ ಮಂಡಳಿ, ರಹಸ್ಯವಾಗಿ ಸಮೀರ್‌ನ ಮೃತದೇಹವನ್ನು ಬ್ರಿಮ್ಸ್ (BRIMS) ಆಸ್ಪತ್ರೆಯ ಶವಗಾರಕ್ಕೆ ರವಾನಿಸಿದೆ. ಪೋಷಕರಿಗೆ ಹೇಳದೇ ಕೇಳದೇ ಈ ರೀತಿ ಮೃತದೇಹವನ್ನು ಸಾಗಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಶಾಲೆಯಲ್ಲಿ ಕಸಗೂಡಿಸುವಂತೆ ಟಾರ್ಚರ್ಕೊಡ್ತಿದ್ರು: ಪೋಷಕರ ಗಂಭೀರ ಆರೋಪ

“ನಮ್ಮ ಮಗ 1ನೇ ತರಗತಿಯಿಂದಲೂ ಇದೇ ಶಾಲೆಯಲ್ಲಿ ಓದುತ್ತಿದ್ದ. ಇತ್ತೀಚೆಗೆ ಶಾಲೆಯ ಮುಖ್ಯ ಶಿಕ್ಷಕರು ಆತನಿಗೆ ವಿಪರೀತ ಕಿರುಕುಳ ನೀಡುತ್ತಿದ್ದರು. ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ತೆಗೆದುಕೊಳ್ಳಬೇಕು ಎಂದು ಒತ್ತಡ ಹೇರುವುದರ ಜೊತೆಗೆ, ಶಾಲೆಯಲ್ಲಿ ಕಸ ಗೂಡಿಸುವ ಕೆಲಸ ಮಾಡುವಂತೆ ಬಲವಂತ ಮಾಡುತ್ತಿದ್ದರು. ಶಿಕ್ಷಕರ ಈ ಮಾನಸಿಕ ಕಿರುಕುಳ ತಾಳಲಾರದೇ ನಮ್ಮ ಮಗ ಪ್ರಾಣ ಕಳೆದುಕೊಂಡಿದ್ದಾನೆ,” ಎಂದು ಮೃತನ ಪೋಷಕರು ಕಣ್ಣೀರು ಹಾಕುತ್ತಾ ಆರೋಪಿಸಿದ್ದಾರೆ.

ಪ್ರಸ್ತುತ ಬ್ರಿಮ್ಸ್ ಆಸ್ಪತ್ರೆಯ ಶವಗಾರದ ಮುಂದೆ ಜಮಾಯಿಸಿರುವ ಕುಟುಂಬಸ್ಥರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆಗೆ ಕಾರಣರಾದ ಮುಖ್ಯ ಶಿಕ್ಷಕರು ಮತ್ತು ಶಾಲಾ ಆಡಳಿತ ಮಂಡಳಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಪಟ್ಟು ಹಿಡಿದಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಬೀದರ್ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

Related Articles

Leave a Reply

Your email address will not be published. Required fields are marked *