BREAKING NEWSCITY CRIME NEWSರಾಜಕೀಯರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ

ಪತ್ರಕರ್ತರ ಹೆಸರಿನಲ್ಲಿ ವಂಚನೆ, ಪೊಲೀಸರ ಹೆಸರಿನಲ್ಲಿ ಹಣ ವಸೂಲಿ!

PCN

POWER CITY NEWS : DHARAWADA ಧಾರವಾಡ: ಪತ್ರಕರ್ತರ ಹೆಸರನ್ನು ದುರುಪಯೋಗಪಡಿಸಿಕೊಂಡು ಮಹಿಳೆಯೊಬ್ಬರಿಗೆ ವಂಚನೆ ಮಾಡಿರುವ ಆರೋಪ ಕೇಳಿಬಂದಿದ್ದು, ಈ ಕುರಿತು ಪೊಲೀಸ್ ಆಯುಕ್ತರ ಕಚೇರಿಗೆ ಲಿಖಿತ ದೂರು ಸಲ್ಲಿಸಿದ್ದರೂ ಇದುವರೆಗೂ ಆರೋಪಿತರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಸಂಘಟನೆಯೊಂದರ ಅಧ್ಯಕ್ಷನಾಗಿ ಗುರುತಿಸಿಕೊಂಡಿದ್ದ ವ್ಯಕ್ತಿಯೊಬ್ಬ ಕಳೆದ ಮೂರ್ನಾಲ್ಕು ವರ್ಷಗಳಿಂದ ಧಾರವಾಡ ಮೂಲದ ಮಹಿಳೆಯೊಂದಿಗೆ ಪರಿಚಯ ಬೆಳೆಸಿಕೊಂಡು ಹಂತ ಹಂತವಾಗಿ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ್ದಾನೆ ಎಂಬುದು ಮಹಿಳೆಯ ಆರೋಪವಾಗಿದೆ.

ನಂತರ ಮಹಿಳೆ ಹಣ ವಾಪಸ್ ಕೇಳಿದಾಗ ಹಣ ನೀಡುವುದಾಗಿ ನಂಬಿಸಿ ಗ್ರಾಮೀಣ ಪ್ರದೇಶದಲ್ಲಿ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಸುದ್ದಿ ಪ್ರಕಟಿಸಿ ನ್ಯಾಯ ಕೊಡಿಸುವುದಾಗಿ ನಂಬಿಸಿ ಪೊಲೀಸ್ ಆಯುಕ್ತರ ಕಚೇರಿಗೆ ಮಹಿಳೆಯನ್ನು ಕರೆಸಿಕೊಂಡು, ಸಿಸಿಬಿ ಪೊಲೀಸರ ಹೆಸರಿನಲ್ಲಿ ಸಾವಿರಾರು ರೂಪಾಯಿ ಪಡೆದಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.

ಈ ಮೂಲಕ ಸಿಸಿಬಿ ಪೊಲೀಸರು ಹಣ ನೀಡಿದರೆ ಮಾತ್ರ ಕೆಲಸ ಮಾಡುತ್ತಾರೆ ಎಂಬ ತಪ್ಪು ಸಂದೇಶವನ್ನು ಸಮಾಜದಲ್ಲಿ ಬಿಂಬಿಸುವ ಪ್ರಯತ್ನ ನಡೆದಿದೆಯೇ ಎಂಬ ಪ್ರಶ್ನೆ ಮೂಡಿದೆ. ಇಂತಹ ಕೃತ್ಯಗಳು ನಿಜವಾದ ಪತ್ರಕರ್ತರ ಘನತೆ ಮತ್ತು ವಿಶ್ವಾಸಾರ್ಹತೆಗೆ ಧಕ್ಕೆ ತರುವ ಆತಂಕವೂ ವ್ಯಕ್ತವಾಗಿದೆ.

ಈ ಕುರಿತು ಮಹಿಳೆ ಪೊಲೀಸ್ ಆಯುಕ್ತರ ಕಚೇರಿಗೆ ಲಿಖಿತ ದೂರು ಸಲ್ಲಿಸಿದ್ದು, ಸುಮಾರು ಎರಡು ತಿಂಗಳ ಹಿಂದೆಯೇ ಅರ್ಜಿಯ ಆಧಾರದ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಧಾರವಾಡ ಉಪನಗರ ಪೊಲೀಸ್ ಠಾಣೆಗೆ ಸೂಚಿಸಲಾಗಿತ್ತು ಎನ್ನಲಾಗಿದೆ. ಆರೋಪಿತರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದು, ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ ಸ್ಪಂದಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನೊಂದೆಡೆ, ನಕಲಿ ದಾಖಲೆ ಸೃಷ್ಟಿಗೆ ಸಂಬಂಧಿಸಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಆರೋಪಿತರ ವಿರುದ್ಧ ವಂಚನೆ ಪ್ರಕರಣಗಳು ದಾಖಲಾಗಿವೆ ಎಂಬ ಆರೋಪವೂ ಕೇಳಿಬಂದಿದೆ. ಇಷ್ಟೆಲ್ಲ ಬೆಳವಣಿಗೆಗಳ ನಡುವೆಯೂ ಆರೋಪಿತರು ತಮ್ಮ ಚಟುವಟಿಕೆ ಮುಂದುವರಿಸಿದ್ದಾರೆ ಎನ್ನಲಾಗುತ್ತಿರುವುದು ಪೊಲೀಸರ ಕಾರ್ಯವೈಖರಿಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಪೊಲೀಸ್ ಇಲಾಖೆಗೆ ಪ್ರಮುಖ ಪ್ರಶ್ನೆಗಳು:

ಮಹಿಳೆ ನೀಡಿದ ದೂರಿನ ಮೇಲೆ ಇದುವರೆಗೆ ಕೈಗೊಂಡ ಕ್ರಮವೇನು? ನಕಲಿ ಪತ್ರಕರ್ತರ ಹೆಸರಿನಲ್ಲಿ ಹಣ ವಸೂಲಿ ಮಾಡಿದ ಆರೋಪದ ಬಗ್ಗೆ ತನಿಖೆ ನಡೆದಿದೆಯೇ? ಸಿಸಿಬಿ ಪೊಲೀಸರ ಹೆಸರನ್ನು ದುರುಪಯೋಗಪಡಿಸಿಕೊಂಡಿರುವ ಆರೋಪದ ಸತ್ಯಾಸತ್ಯತೆ ಪರಿಶೀಲಿಸಲಾಗಿದೆಯೇ?

ದಕ್ಷತೆ ಮತ್ತು ಪ್ರಾಮಾಣಿಕತೆಗೆ ಹೆಸರಾಗಿರುವ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಭೂಷಣ್ ಬೋರ್ಸೆ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಮಹಿಳೆಗೆ ನ್ಯಾಯ ಒದಗಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

ದೂರುದಾರ ಮಹಿಳೆಗೆ ನ್ಯಾಯ ಸಿಗುತ್ತದೆಯೇ? ನಕಲಿ ಪತ್ರಕರ್ತರ ಮುಖವಾಡ ಕಳಚುತ್ತದೆಯೇ? ಅಥವಾ ಈ ಪ್ರಕರಣವೂ ಕಡತದಲ್ಲೇ ಉಳಿಯುತ್ತದೆಯೇ? ಎಂಬ ಪ್ರಶ್ನೆಗಳು ಈಗ ಸಾರ್ವಜನಿಕ ವಲಯದಲ್ಲಿ ಮೂಡಿವೆ.

ವಿಶೇಷ ಸೂಚನೆ : “ಪವರ್ ಸಿಟಿ ನ್ಯೂಸ್” “ಸತ್ಯ ಸದಾಕಾಲ!”

PCN….

Related Articles

Leave a Reply

Your email address will not be published. Required fields are marked *