
POWER CITYNEWS : HUBBALLI/ಹುಬ್ಬಳ್ಳಿ: ಪ್ರಮುಖ ರೈತ ಹೋರಾಟಗಾರ ಕೊಡಿಹಳ್ಳಿ ಚಂದ್ರಶೇಖರ್ ಅವರಿಗೆ ಹುಬ್ಬಳ್ಳಿಯ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ (JMFC) ನ್ಯಾಯಾಲಯವು 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ. ನ್ಯಾಯಾಧೀಶರಾದ ಸಚಿನ್ ಕುಮಾರ್ ಶಿವಪೂಜೆ ಅವರು ಈ ಮಹತ್ವದ ತೀರ್ಪು ನೀಡಿದ್ದಾರೆ.
ಪ್ರಕರಣದ ವಿವರ:
2013ರಲ್ಲಿ ನಡೆದಿದ್ದ ಪ್ರಸಿದ್ಧ ಕಳಸಾ-ಬಂಡೂರಿ ಹೋರಾಟದ ಸಮಯದಲ್ಲಿ ರೈಲು ತಡೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಿಹಳ್ಳಿ ಚಂದ್ರಶೇಖರ್ ಅವರನ್ನು ಬಂಧಿಸಲಾಗಿತ್ತು. ಈ ಪ್ರಕರಣದ ವಿಚಾರಣೆ ವೇಳೆ ಕೊಡಿಹಳ್ಳಿ ಪರ ವಕೀಲರು ಜಾಮೀನು ನೀಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.
ನ್ಯಾಯಾಧೀಶರ ತರಾಟೆ:
ವಿಚಾರಣೆ ವೇಳೆ ಕೊಡಿಹಳ್ಳಿ ಚಂದ್ರಶೇಖರ್ ಅವರ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಧೀಶರು, ನ್ಯಾಯಾಲಯದ ಕಟ್ಟಳೆಗಳನ್ನು ಪಾಲಿಸದ ಬಗ್ಗೆ ಕ್ಲಾಸ್ ತೆಗೆದುಕೊಂಡರು.
“ನ್ಯಾಯಾಲಯವು ಎಲ್ಲ ಹೋರಾಟಗಾರರನ್ನು ಗೌರವದಿಂದ ಕಾಣುತ್ತದೆ. ಅದೇ ರೀತಿ ಹೋರಾಟಗಾರರು ಸಹ ಕಾನೂನು ಮತ್ತು ನ್ಯಾಯಾಲಯಕ್ಕೆ ಗೌರವ ನೀಡಬೇಕು. ಕಾನೂನನ್ನು ಗೌರವಿಸದವರು ನಿಜವಾದ ಹೋರಾಟಗಾರರಾಗಲು ಸಾಧ್ಯವಿಲ್ಲ. ನೀವು ಈ ಪ್ರಕರಣದಲ್ಲಿ 2019ರಿಂದಲೂ ವಿಚಾರಣೆಗೆ ಹಾಜರಾಗಿಲ್ಲ. ಈಗ ಮತ್ತೆ ನಿಮಗೆ ಜಾಮೀನು ನೀಡಿದರೆ ಮುಂದಿನ ಐದು ವರ್ಷಗಳ ಕಾಲ ಕೋರ್ಟ್ಗೆ ಹಾಜರಾಗುವುದಿಲ್ಲ,” ಎಂದು ನ್ಯಾಯಾಧೀಶರು ತರಾಟೆಗೆ ತೆಗೆದುಕೊಂಡರು ಎಂದು ತಿಳಿದುಬಂದಿದೆ.
ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯವು, ಅವರನ್ನು ಅಕ್ಟೋಬರ್ 9ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದೆ.



