ಧಾರವಾಡ

ಜಂಗ್ಲಿ ಕುಲಪತಿಯ ಜಂಗೀ ಕಥೆ” ಕೃತಿ ನವೆಂಬರ್ 23 ಕ್ಕೆ ಲೋಕಾರ್ಪಣೆ

ಧಾರವಾಡ

ಇದೇ 23 ಮಂಗಳವಾರ ಸಂಜೆ 5.30 ಕ್ಕೆ ಧಾರವಾಡ ರಂಗಾಯಣ ಆವರಣದಲ್ಲಿ ಇರುವ ಸುವರ್ಣ ಸಾಂಸ್ಕೃತಿಕ ಸಮುಚ್ಚಯದಲ್ಲಿ ಕುಲಪತಿ ಡಾ.ತೇಜಸ್ವಿ ಕಟ್ಟೀಮನಿ ಅವರು ಬರೆದಿರುವ, ಮನೋಹರ ಗ್ರಂಥಮಾಲೆ ಹೊರತಂದಿರುವ “ಜಂಗ್ಲಿ ಕುಲಪತಿಯ ಜಂಗೀ ಕಥೆ” ಕೃತಿ ಖ್ಯಾತ ಲೇಖಕ, ಕಾದಂಬರಿಕಾರ ಶ್ರೀ ರಾಘವೇಂದ್ರ ಪಾಟೀಲರು ಕೃತಿಯನ್ನು ಬಿಡುಗಡೆ ಮಾಡಲಿದ್ದಾರೆ. ಲೇಖಕ ಡಾ.ಬಸವರಾಜ ಡೋಣೂರ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಡಾ.ವಿ ಟಿ ನಾಯಕ ಕೃತಿ ಪರಿಚಯ ಮಾಡಲಿದ್ದಾರೆ. ಡಾ.ತೇಜಸ್ವಿ ಕಟ್ಟೀಮನಿ ಉಪಸ್ಥಿತರಿರಲಿದ್ದಾರೆ.


ಎಲ್ಲಾ ಆಸಕ್ತರು ಭಾಗವಹಿಸಲು ಮನೋಹರ ಗ್ರಂಥಮಾಲೆ ಸಂಪಾದಕ ಪ್ರಕಾಶಕ ಡಾ.ರಮಾಕಾಂತ ಜೋಶಿ ಅವರು ವಿನಂತಿಸಿದ್ದಾರೆ.
ಪ್ರೊ. ತೇಜಸ್ವಿ ಕಟ್ಟೀಮನಿಯವರ ‘ಜಂಗ್ಲಿ ಕುಲಪತಿಯ ಜಂಗೀಕತೆ’ ಆತ್ಮಕಥನ ಸಾಮಾಜಿಕ ಸಂಕಥನವೂ ಉನ್ನತ ಶಿಕ್ಷಣ ಸಂಸ್ಥೆಯನ್ನು ಕಟ್ಟುವಾಗ ಕೆಳಸಮುದಾಯದಿಂದ ಬಂದ ಶಿಕ್ಷಣ ಆಡಳಿತಾಧಿಕಾರಿಗಳು ಎದುರಿಸುವ ಸವಾಲುಗಳ, ಕ್ಷಣ ಕ್ಷಣಕ್ಕೂ ಅವರು ಸ್ವೀಕರಿಸಬೇಕಾಗಿ ಬರುವ ಪಂಥಾಹ್ವಾನಗಳ ಹಾಗೂ ಕಷ್ಟ- ಕಾರ್ಪಣ್ಯಗಳ ಕಥೆಯೂ ಆಗಿದೆ. ಆದಿವಾಸಿ ಜನರು ಎದುರಿಸುವ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಮತ್ತು ನೈತಿಕ ಸವಾಲುಗಳ, ಸಮಸ್ಯೆಗಳ ಸ್ವರೂಪ ಬಹಳ ಭಿನ್ನವಾಗಿರುತ್ತದೆ. ಆದಿವಾಸಿಯೊಬ್ಬ ಆದಿವಾಸಿ ವಿಶ್ವವಿದ್ಯಾಲಯ ಕಟ್ಟುವ ಸಂದರ್ಭದಲ್ಲಿ ಎದುರಿಸುವ ಸಮಸ್ಯೆಗಳೂ ಅಷ್ಟೇ ವಿಭಿನ್ನವೂ, ಜಟಿಲವೂ, ಸಂಕೀರ್ಣವೂ ಆಗಿರುತ್ತವೆ. ಇಂಥ ಅನೇಕ ಜಟಿಲ ಸಂಕೀರ್ಣ ಅನುಭವಗಳು ಇಲ್ಲಿ ಸಂಕಥನದ ಶೈಲಿಯಲ್ಲಿ, ನೇರ ಭಾಷೆಯಲ್ಲಿ ವ್ಯಕ್ತಗೊಂಡಿವೆ. ಇವು ಕಲ್ಪಿತ ಕಥೆಗಳಲ್ಲ, ವೈಭವೀಕರಣಗೊಂಡ, ರೋಮ್ಯಾಂಟೀಕರಣಗೊಂಡ ಅನುಭವಗಳೂ ಅಲ್ಲ. ಕಟ್ಟೀಮನಿಯವರು ಅನುಭವಿಸಿದ ಘಟನೆಗಳು, ಸಂದರ್ಭಗಳು ಇಲ್ಲಿ ಕಲಾತ್ಮಕತೆಯ ಸ್ಪರ್ಶದಿಂದ ಮರುಹುಟ್ಟು ಪಡೆದಿವೆ. ಈ ದೇಶದ ಜ್ವಲಂತ ಸಮಸ್ಯೆಗಳನ್ನು ತಟಸ್ಥವಾಗಿ ನೋಡಿ, ಅವುಗಳನ್ನು ಸಮರ್ಥವಾಗಿ ಎದುರಿಸಿ, ಅವುಗಳಿಗೆ ಸೃಜನಶೀಲತೆಯ ಸ್ಪರ್ಶ ನೀಡಿದ್ದರಿಂದ ಕಟ್ಟೀಮನಿಯವರ ಆತ್ಮಕತೆ ವಿಶಿಷ್ಟವಾಗಿ ಮೂಡಿಬರಲು ಸಾಧ್ಯವಾಗಿದೆ.
ಅಪ್ಯಾಯಮಾನವಾದ ಶೈಲಿ, ರೂಪಾತ್ಮಕತೆ ಬಿಟ್ಟು ಕೊಡದ, ನೇರವಾದ ಭಾಷೆ, ಮನೋಜ್ಞ ನಿರೂಪಣೆ, ಎದೆಗೆ ಭಾರವಾಗದ ಹಾಗೆ ಅಂತರಂಗ ತಟ್ಟುವ, ತಲೆಗೆ ಭಾರವಾಗದ ಹಾಗೆ ಬುದ್ಧಿಗೆ ಸವಾಲು ಹಾಕುವ, ನಮ್ಮ ನೈತಿಕ ಪ್ರಜ್ಞೆ ಎಚ್ಚರಿಸುವ, ವಿವೇಕದ ಕಣ್ಣು ತೆರೆಯಿಸುವ ‘ಜಂಗೀಕತೆ’ ಭಾರತೀಯ ಆತ್ಮಕತೆಗಳಲ್ಲಿ ವಿಭಿನ್ನ ದಾರಿ ತುಳಿದಿದೆ ಮತ್ತು ಓದುಗರ ಮನಸ್ಸಿನಲ್ಲಿ ವಿಷಾದದ, ನವಿರಾದ ಮತ್ತು ಭರವಸೆಯ ಭಾವನೆಗಳನ್ನು ಹುಟ್ಟಿಸುತ್ತದೆ.

Related Articles

Leave a Reply

Your email address will not be published. Required fields are marked *

Back to top button