ನ.9 ರಂದು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ 25 ನೇಯ ವರ್ಷಾಚರಣೆ
ಜನಜಾಗೃತಿಗಾಗಿ ಬೈಕ್ ಮುಖಾಂತರ ಮೆರವಣಿಗೆ , ವಕೀಲರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಆಯೋಜನೆ ಮಾಡಲಾಗಿದೆ ಎಂದು ಧಾರವಾಡ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶೆ ಸಿ.ಎಮ್. ಪುಷ್ಪಲತ ಹೇಳಿದ್ರು.
ಜನಸಾಮಾನ್ಯರಿಗೆ ಉಚಿತವಾಗಿ ಕಾನೂನಿನ ಅರಿವು ಮೂಡಿಸಿ ನೆರವು ನೀಡುವ ಹಾಗೂ ನ್ಯಾಯಾಂಗದ ಸೇವೆಗಳನ್ನು ಜನರಿಗೆ ತಲುಪಿಸುವ ಸದುದ್ದೇಶದಿಂದ ಸ್ಥಾಪನೆಗೊಂಡಿರುವ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವು ಬರುವ ನವೆಂಬರ್ 09 ಕ್ಕೆ ಅರ್ಥಪೂರ್ಣವಾದ 25 ವರ್ಷಗಳನ್ನು ಪೂರೈಸಿದ್ದು, ಈ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನವೆಂಬರ್ 09 ರಂದು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾಗಿರುವ ಹಿರಿಯ ಸಿವಿಲ್ ನ್ಯಾಯಾಧೀಶೆ ಸಿ.ಎಮ್. ಪುಷ್ಪಲತ ತಿಳಿಸಿದ್ರು.
ಇಂದು ಸಂಜೆ ಜಿಲ್ಲಾ ನ್ಯಾಯಾಲಯದ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ನ್ಯಾಯಾಧೀಶರು, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಸಂಸ್ಥಾಪನೆ ದಿನಾಚರಣೆ ನಿಮಿತ್ಯ ನವೆಂಬರ್ 09 ರ ಬೆಳಿಗ್ಗೆ 09 ಗಂಟೆಗೆ ಜಿಲ್ಲಾ ನ್ಯಾಯಾಲಯದಿಂದ ಕಾನೂನು ಸೇವೆಗಳ ಜಾಗೃತಿಗಾಗಿ ನ್ಯಾಯವಾದಿಗಳ ಹಾಗೂ ಪ್ಯಾನಲ್ ವಕೀಲರ ಸಹಯೋಗದಲ್ಲಿ ನಗರದಾದ್ಯಂತ ಬೈಕ್ ರ್ಯಾಲಿ ಜರುಗಲಿದೆ. ನಂತರ ಸಿವಿಲ್ಕೋರ್ಟ ಆವರಣದ ಎಡಿಎಲ್ಆರ್ ಕಟ್ಟಡದ ಸಭಾಂಗಣದಲ್ಲಿ ನ್ಯಾಯಾಂಗ ಸಿಬ್ಬಂದಿ, ನ್ಯಾಯವಾದಿಗಳು ಮತ್ತು ನ್ಯಾಯವಾದಿಗಳ ಕುಟುಂಬ ಸದಸ್ಯರಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಆರೋಗ್ಯ ಕಾರ್ಡ ವಿತರಣೆ ಕಾರ್ಯಕ್ರಮ ಜರುಗಲಿದೆ. ಇದೆ ಸಂದರ್ಭದಲ್ಲಿ ನ್ಯಾಯಾಂಗ ಇಲಾಖೆ ಸಿಬ್ಬಂದಿ ಹಾಗೂ ನ್ಯಾಯವಾದಿಗಳು ರಕ್ತದಾನ ಶಿಬಿರ ಆಯೋಜಿಸಿದ್ದಾರೆ ಎಂದು ಅವರು ಹೇಳಿದರು. ಧಾರವಾಡ ವಕೀಲರ ಸಭಾಂಗಣದಲ್ಲಿ ಸಂಸ್ಥಾಪನಾ ದಿನಾಚರಣೆಯ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಹೈಕೋರ್ಟ ನ್ಯಾಯಮೂರ್ತಿಗಳು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಆಜಾಧಿ ಕಾ ಅಮೃತ ಮಹೋತ್ಸವ ಆಚರಣೆ: ಭಾರತ ಸರ್ಕಾರ ಹಾಗೂ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಜಿಲ್ಲಾಡಳಿತದ ಸಹಯೋಗದಲ್ಲಿ ಜಿಲ್ಲೆಯಾದ್ಯಂತ ಅಕ್ಟೋಬರ್ 2 ರಿಂದ ವಿವಿಧ ರೀತಿಯ ಸಾಮಾಜಿಕ ಅರಿವು ಮೂಡಿಸುವ ಮತ್ತು ಕಾನೂನು ಸೇವೆಗಳ ನೇರವು-ಅರಿವು ನೀಡುವ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಲಾಗುತ್ತಿದೆ ಎಂದು ಅವರು ಹೇಳಿದರು. ಜಿಲ್ಲೆಯ ನಗರ ಮತ್ತು ವಿವಿಧ ಗ್ರಾಮಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ಸರ್ಕಾರದ ವಿವಿಧ ಇಲಾಖೆಗಳ ನೆರವಿನಿಂದ 500 ಕ್ಕೂ ಹೆಚ್ಚು ಜನ ಜಗೃತಿ ಕಾರ್ಯಕ್ರಮಗಳನ್ನು ಸಾರ್ವಜನಿಕರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಯಶಸ್ವಿಯಾಗಿ ಸಂಘಟಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಸಿ.ಎಮ್. ಪುಷ್ಪಲತ ಅವರು ತಿಳಿಸಿದರು.
ಡಿಸೆಂಬರ್ 18 ರಂದು ರಾಷ್ಟ್ರೀಯ ಲೋಕ ಅದಾಲತ್ ಆಯೋಜನೆ : ತ್ವರಿತ ನ್ಯಾಯಕ್ಕಾಗಿ ವ್ಯಾಜ್ಯ ಇತ್ಯರ್ಥ ಪಡಿಸಿಕೊಳ್ಳಲು ರಾಜ್ಯದಾದ್ಯಂತ ಡಿಸೆಂಬರ್ 18. 2021 ರಂದು ರಾಷ್ಟ್ರೀಯ ಲೋಕ ಅದಾಲತ್ ಆಯೋಜಿಸಲಾಗುತ್ತಿದೆ. ಧಾರವಾಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ರಾಷ್ಟ್ರೀಯ ಲೋಕ ಅದಾಲತ್ ಮೂಲಕ ಹೆಚ್ಚು ಸಂಖ್ಯೆಯ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಕ್ರಮವಹಿಸುತ್ತಿದೆ. ಈಗಾಗಲೇ ಜಿಲ್ಲಾ ನ್ಯಾಯಾಲಯದ ಹಾಗೂ ತಾಲೂಕು ನ್ಯಾಯಾಲಯಗಳ ವಕೀಲರ ಸಂಘಗಳಿಗೆ ಲೋಕ ಅದಾಲತ್ ಕುರಿತ ಮಾಹಿತಿ ನೀಡಲಾಗಿದ್ದು, ಬಾಕಿ ಇರುವ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಲೋಕ ಅದಾಲತ್ಗೆ ತರುವ ಪ್ರಯತ್ನ ಮಾಡಲು ಮತ್ತು ತಮ್ಮ ಕಕ್ಷಿದಾರರಿಗೆ ಲೋಕ ಅದಾಲತ್ ಲಾಭಗಳ ಕುರಿತು ಮನವರಿಕೆ ಮಾಡುವಂತೆ ತಿಳಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಸಿ.ಎಮ್. ಪುಷ್ಪಲತ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ಯಾನಲ್ ವಕೀಲರಾದ ಸೋಮಶೇಖರ ಜಾಡರ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಿಬ್ಬಂದಿಗಳು ಉಪಸ್ಥಿತರಿದ್ದರು.