ಧಾರವಾಡ

ಹೊಲ್ತಿಕೋಟಿ ಕೆರೆ ಒಡೆದ ಸ್ಥಳ ವೀಕ್ಷಣೆ ಕೆರೆಯ ಶಾಶ್ವತ ದುರಸ್ತಿಗೆ ಆದ್ಯತೆ ಮಳೆ ಮುಂದುವರಿಕೆ ಸಾಧ್ಯತೆ ಎಚ್ಚರಿಕೆ ವಹಿಸಲು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮನವಿ

ಧಾರವಾಡ

ಇಲ್ಲಿನ ಹೊಲ್ತಿಕೋಟಿ ಗ್ರಾಮದ ಕೆರೆ ಒಡೆದು ಅಪಾರ ಪ್ರಮಾಣದ ನೀರು ಪೋಲಾದ ಪರಿಣಾಮವಾಗಿ ರೈತರ ಬೆಳೆಗಳು,ಪ್ರಾಣಿ,ಪಕ್ಷಿಗಳಿಗೆ ಅಪಾರ ಹಾನಿಯಾಗಿದೆ.ಕೆರೆಯ ಶಾಶ್ವತ ದುರಸ್ತಿಗೆ ಆದ್ಯತೆಯಡಿ ಕ್ರಮವಹಿಸಲಾಗುವುದು. ಸದ್ಯ ಸೂಕ್ತ ತಾಂತ್ರಿಕತೆಯೊಂದಿಗೆ ಪೋಲಾಗುತ್ತಿರುವ ನೀರನ್ನು ತಡೆಯಲು ಪ್ರಯತ್ನಿಸಲಾಗುವುದು.ಮುಂಬರುವ 2-3 ದಿನಗಳವರೆಗೆ ಮಳೆ ಮುಂದುವರೆಯುವ ಸಾಧ್ಯತೆ ಇರುವುದರಿಂದ ರೈತರು ಜೀವ ರಕ್ಷಣೆಗೆ ಎಚ್ಚರಿಕೆ ವಹಿಸಬೇಕು ಎಂದು ಕೈಮಗ್ಗ,ಜವಳಿ,ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.

ಹೊಲ್ತಿಕೋಟಿಯ ಕೆರೆ ಒಡೆದ ಸ್ಥಳಕ್ಕೆ ಭೇಟಿ ನೀಡಿ ,ಹಾನಿ ವೀಕ್ಷಿಸಿದ ಅವರು, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಸುಮಾರು 110 ಮಿಲಿ ಮೀಟರ್ ಪ್ರಮಾಣದ ಮಳೆಯಾದ ಪರಿಣಾಮವಾಗಿ , ಹೊಲ್ತಿಕೋಟಿ ಕೆರೆಗೆ ಒಳಹರಿವು ಹೆಚ್ಚಾದ ಪರಿಣಾಮ, ಕೆರೆಯ ತಡೆಗೋಡೆ ಒಡೆದು ಸುಮಾರು 27 ಎಕರೆ ವಿಸ್ತಾರದ ಕೆರೆಯಲ್ಲಿ ಸಂಗ್ರಹವಾಗಿದ್ದ ದೊಡ್ಡ ಪ್ರಮಾಣದ ನೀರು ಪೋಲಾಗಿದೆ.ಸುಮಾರು 300 ಎಕರೆಗೂ ಅಧಿಕ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬು,ಭತ್ತ ಹಾನಿಯಾಗಿದೆ.ಜಿಲ್ಲೆಯ ಕುಂದಗೋಳ,ನವಲಗುಂದ,ಹುಬ್ಬಳ್ಳಿ,ಕಲಘಟಗಿ ತಾಲೂಕುಗಳಲ್ಲಿಯೂ ಕೂಡ ಮಳೆಯಿಂದ ಹತ್ತಿ ಬೆಳೆ ಹಾನಿಯಾಗಿದೆ.ಪ್ರಸ್ತುತ ರಾಜ್ಯದಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಕೂಡ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಸಮೀಕ್ಷೆ ಮಾಡಲು ಸೂಚಿಸಲಾಗಿದೆ.ಬೆಳೆ ಹಾಗೂ ಮನೆಗಳ ಹಾನಿಗೊಳಗಾದವರಿಗೆ ಸಮೀಕ್ಷೆ ವರದಿ ಆಧರಿಸಿ ಪರಿಹಾರ ಒದಗಿಸಲಾಗುವುದು ಎಂದರು.

ಹೊಲ್ತಿಕೋಟಿ ಕೆರೆಯು 30 ವರ್ಷಗಳ ಹಿಂದೆ ಒಂದು ಬಾರಿ ಒಡೆದಿತ್ತು ಎಂಬುದನ್ನು ಸ್ಥಳೀಯ ರೈತರು ಹೇಳಿದ್ದಾರೆ.ಕೆರೆಯ ಶಾಶ್ವತ ದುರಸ್ತಿಗೆ ಕ್ರಮ ವಹಿಸಲಾಗುವುದು.ಹೊಲ್ತಿಕೋಟಿ ಟೆನೆಂಟ್ ಫಾರ್ಮಿಂಗ್ ಸೊಸೈಟಿಯ ಹೆಸರಿನ ಮಾಲೀಕತ್ವದಲ್ಲಿರುವ ಸುಮಾರು 220 ಎಕರೆ ಭೂಮಿಯನ್ನು ರೈತರಿಗೆ ಹೆಸರಿಗೆ ವರ್ಗಾಯಿಸಲು ಸ್ಥಳೀಯರ ಬೇಡಿಕೆ ಇದೆ.ಅಗತ್ಯ ದಾಖಲೆಗಳನ್ನು ಪಡೆದು ವರ್ಗಾಯಿಸಲು ಕಂದಾಯ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗಿದೆ.ಸರ್ಕಾರದ ಮಟ್ಟದಲ್ಲಿಯೂ ನೆರವು ನೀಡಲಾಗುವುದು. ಈ ಮಳೆಯು ಇನ್ನೂ 2-3 ದಿನಗಳ ಕಾಲ ಮುಂದುವರೆಯುವ ಸಾಧ್ಯತೆಗಳಿರುವುದರಿಂದ ರೈತರು ಹೊಲ-ಗದ್ದೆಗಳಿಗೆ ತೆರಳುವಾಗ,ಹಳ್ಳ-ಕೊಳ್ಳಗಳನ್ನು ದಾಟುವ ಮುನ್ನ ತೀವ್ರ ಎಚ್ಚರಿಕೆ ವಹಿಸಬೇಕು.ಮಳೆ ಬೀಳುವಾಗ ಸುರಕ್ಷಿತ ಸ್ಥಳಗಳಲ್ಲಿ ಇರಬೇಕು ಎಂದು ಸಚಿವರು ಮನವಿ ಮಾಡಿದರು.

ಹಳ್ಳಿಗೇರಿ ಗ್ರಾ.ಪಂ.ಅಧ್ಯಕ್ಷೆ ರುಕ್ಮಿಣಿ ಅರಳಿಕಟ್ಟಿ,ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ರೇಖಾ ಡೊಳ್ಳಿನವರ,ಧಾರವಾಡ ತಹಸೀಲ್ದಾರ ಡಾ.ಸಂತೋಷಕುಮಾರ ಬಿರಾದಾರ,ಪಂಚಾಯತರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಎಂ.ಎಂ.ಗೌಡರ್ ಸೇರಿದಂತೆ ಗ್ರಾಮಸ್ಥರು,ರೈತರು ಇದ್ದರು.

Related Articles

Leave a Reply

Your email address will not be published. Required fields are marked *

Back to top button