bangaluruBREAKING NEWSDHARWADLife StylePoliceRain

ವರುಣನ ಅಬ್ಬರ: ಕೇಂದ್ರ ಸಚಿವರ ಕಚೇರಿ ಆವರಣದಲ್ಲೇ ಉರುಳಿದ ಬೃಹತ್ ಮರ!

POWER CITY

POWER CITYNEWS : ಸುದ್ದಿ ವಿಭಾಗ ಹುಬ್ಬಳ್ಳಿ/ಹುಬ್ಬಳ್ಳಿ: ಅವಳಿ ನಗರದಲ್ಲಿ ಮುಂಗಾರು ಮಳೆಯ ಆರ್ಭಟ ಜೋರಾಗಿದೆ. ಇಂದು ಮಧ್ಯಾಹ್ನ ದಿಢೀರನೆ ಆರಂಭವಾದ ಗುಡುಗು ಸಹಿತ ಧಾರಾಕಾರ ಮಳೆಗೆ ಹುಬ್ಬಳ್ಳಿಯ ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದು, ಸಾರ್ವಜನಿಕರು ಹಾಗೂ ಸವಾರರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಮಳೆಯ ತೀವ್ರತೆಗೆ ನಗರದ ಹಲವೆಡೆ ಮರಗಳು ಧರೆಗುರುಳಿವೆ.



*ಜೋಶಿ ಕಚೇರಿ ಆವರಣದಲ್ಲಿ ಮರ ಪತನ:*
ಮಳೆಯ ಆರ್ಭಟಕ್ಕೆ ಚಿಟಗುಪ್ಪಿ ಆಸ್ಪತ್ರೆ ರಸ್ತೆಯಲ್ಲಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಕಾರ್ಯಾಲಯದ ಆವರಣದಲ್ಲಿದ್ದ ಬೃಹತ್ ಮರವೊಂದು ಭಾರಿ ಶಬ್ದದೊಂದಿಗೆ ಬುಡಸಮೇತ ಉರುಳಿ ಬಿದ್ದಿದೆ. ಮರ ಬೀಳುವ ಸಮಯದಲ್ಲಿ ಕಚೇರಿಯ ಮುಂಭಾಗದಲ್ಲಿ ಯಾರೂ ಇಲ್ಲದಿದ್ದರಿಂದ ಹಾಗೂ ವಾಹನಗಳನ್ನು ನಿಲ್ಲಿಸದೇ ಇದ್ದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ, ದೊಡ್ಡ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಹೆಸ್ಕಾಂ ಹಾಗೂ ಮಹಾನಗರ ಪಾಲಿಕೆ ಸಿಬ್ಬಂದಿ ಮರವನ್ನು ತೆರವುಗೊಳಿಸುವ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಜಲಾವೃತಗೊಂಡ ಅವಳಿನಗರದ ರಸ್ತೆಗಳು:
ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಬಿರುಗಾಳಿ ಸಹಿತ ಮಳೆಗೆ ದಾಜಿಬಾನಪೇಟೆ, ಕೊಪ್ಪಿಕರ್ ರಸ್ತೆ, ಹಳೇ ಹುಬ್ಬಳ್ಳಿ ಹಾಗೂ ಬಂಕಾಪುರ ಚೌಕ ಸೇರಿದಂತೆ ಪ್ರಮುಖ ವಾಣಿಜ್ಯ ಪ್ರದೇಶಗಳ ರಸ್ತೆಗಳು ಕೆರೆಯಂತಾಗಿದ್ದವು. ತಗ್ಗು ಪ್ರದೇಶದ ಕೆಲವು ಮನೆ ಹಾಗೂ ಅಂಗಡಿಗಳಿಗೆ ನೀರು ನುಗ್ಗಿದ್ದು, ವ್ಯಾಪಾರಸ್ಥರು ನೀರು ಹೊರಹಾಕಲು ಹರಸಾಹಸ ಪಟ್ಟರು. ಇನ್ನು ನಗರದ ರೈಲ್ವೆ ಅಂಡರ್ ಬ್ರಿಡ್ಜ್‌ಗಳಲ್ಲಿ ನೀರು ನಿಂತಿದ್ದರಿಂದ ಕೆಲಕಾಲ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು.
*ವಾಹನ ಸವಾರರ ಪರದಾಟ:*
ದಿಢೀರ್ ಮಳೆಯಿಂದಾಗಿ ಕಚೇರಿ ಮತ್ತು ಕೆಲಸ ಕಾರ್ಯಗಳಿಗೆ ತೆರಳುತ್ತಿದ್ದ ದ್ವಿಚಕ್ರ ವಾಹನ ಸವಾರರು ಜಿಟಿ ಜಿಟಿ ಮಳೆಯಲ್ಲಿ ನೆನೆಯುತ್ತಲೇ ಸಾಗಬೇಕಾಯಿತು. ಒಳಚರಂಡಿ ವ್ಯವಸ್ಥೆ ಸರಿಯಿಲ್ಲದ ಕಾರಣ ರಸ್ತೆಗಳ ಮೇಲೆಲ್ಲಾ ಚರಂಡಿ ನೀರು ಹರಿದು ಸಾರ್ವಜನಿಕರು ಪಾಲಿಕೆ ವಿರುದ್ಧ ಆಕ್ರೋಶ ಹೊರಹಾಕಿದರು. ಒಟ್ಟಿನಲ್ಲಿ ಮುಂಗಾರು ಆರಂಭದಲ್ಲೇ ಇಷ್ಟೊಂದು ಅವಾಂತರ ಸೃಷ್ಟಿಯಾಗಿದ್ದು, ಮುಂದಿನ ದಿನಗಳಲ್ಲಿ ಪಾಲಿಕೆ ಅಧಿಕಾರಿಗಳು ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ರಮೇಶ್ ಅಲಗೇರಿ:

POWER CITY NEWS
ಹುಬ್ಬಳ್ಳಿ

Related Articles

Leave a Reply

Your email address will not be published. Required fields are marked *