ಸ್ಥಳೀಯ ಸುದ್ದಿ

ಅಕಾಲಿಕ ಮಳೆಗೆ ಜಿಲ್ಲೆಯಲ್ಲಿ 30,103 ಹೆಕ್ಟೇರ್ ಬೆಳೆ ಹಾನಿ: ಜಿಲ್ಲಾಧಿಕಾರಿ ನಿತೇಶ ಪಾಟೀಲ

Click to Translate

ಧಾರವಾಡ

ಕಳೆದ ಮೂರು ದಿನಗಳಿಂದ ಅಕಾಲಿಕವಾಗಿ ಸುರಿದ ಮಳೆಯಿಂದ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಬೆಳೆಹಾನಿ,ಮನೆಗಳ ಕುಸಿತ, ರಸ್ತೆ, ಸೇರಿದಂತೆ ವಿವಿಧ ಮೂಲಸೌಕರ್ಯಗಳ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

ಅವರು ಇಂದು ಕುಂದಗೋಳ ತಾಲೂಕಿನ ಪಶುಪತಿಹಾಳ , ಸಂಶಿ, ಗುಡಗೇರಿ ಗ್ರಾಮಗಳಿಗೆ ಇಂದು ಮಧ್ಯಾಹ್ನ, ಭೇಟಿ ನೀಡಿ ಪರಿಶೀಲಿಸಿ, ಮಾತನಾಡಿದರು.

ಧಾರವಾಡ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯ ಪರಿಣಾಮ ನವೆಂಬರ್ 20 ವರೆಗಿನ ಜಂಟಿ ಸಮೀಕ್ಷೆ ಪ್ರಕಾರ ಅಂದಾಜು 21,344 ಹೆಕ್ಟೇರ್ ಕೃಷಿ ಬೆಳೆ ಮತ್ತು 8,759 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಈಗಾಗಲೇ ಕಂದಾಯ ಇಲಾಖೆ,ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಜಂಟಿ ಸಮೀಕ್ಷೆ ಮಾಡುತ್ತಿದ್ದು, ಇಂದು ಮತ್ತು ನಾಳೆಯೂ ಬೆಳೆ ಹಾನಿ ಸಮೀಕ್ಷೆ ಮಾಡಲಿದ್ದಾರೆ.

ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಸುಮಾರು 68 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆಯಾಗಿತ್ತು. ಮತ್ತು ಅದು ಈಗ ಕಟಾವಿಗೆ ಬಂದಿತ್ತು. ಆದರೆ ಈ ಅಕಾಲಿಕೆ ಮಳೆಯಿಂದಾಗಿ ಹತ್ತಿ ಬೆಳೆ ಹೆಚ್ವು ಹಾನಿಯಾಗಿರುವ ಸಂಭವಿದ್ದು, ಸರ್ವೆ ಕಾರ್ಯ ಕೈಗೊಳ್ಳಲಾಗಿದೆ.

ಸಂಶಿ ಗ್ರಾಮದ ಬೆಳೆ ಹಾನಿ ಜಮೀನಿಗೆ ಭೇಟಿ:
ಕುಂದಗೋಳ ತಾಲೂಕಿನ ಪಶುಪತಿಹಾಳ ಗ್ರಾಮದ ಹತ್ತಿರ ಇರುವ ಸಂಶಿ ಗ್ರಾಮ ಹದ್ದೆಯ ರೈತ ಮಂಜುನಾಥ ಬಸವಂತಪ್ಪ ಗೊನಾಳ ಅವರ ಮಾಲಿಕತ್ವದ (ಸರ್ವೆ ನಂ:518/2) ಜಮೀನದಲ್ಲಿ ಬೆಳೆಯಲಾಗಿರುವ ಮೆಣಸಿನಕಾಯಿ ಬೆಳೆ ಹಾನಿಯಾಗಿದೆ. ಜಿಲ್ಲಾಧಿಕಾರಿಗಳು ಸ್ವತಃ ಜಮೀನಗೆ ಭೇಟಿ ನೀಡಿ, ಗಿಡದಲ್ಲಿಯೇ ಕೊಳೆತ ಸ್ಥಿತಿಯಲ್ಲಿರುವ ಹಸಿ ಹಾಗೂ ಕಪು ಮೆಣಸಿನಕಾಯಿ ಬೆಳೆ ಹಾನಿ ಪರಿಶೀಲಿಸಿದರು.

ಬೆಳೆಹಾನಿಗೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲ ರೈತರ ಜಮೀನು ಬೆಳೆಗಳ ಜಂಟಿಸಮೀಕ್ಷೆ ಆರಂಭಿಸಲಾಗಿದ್ದು, ಹಾನಿಗೊಳಗಾದ ಬೆಳೆಗೆ ನಿಯಮಾನುಸಾರ ಪರಿಹಾರ ಒದಗಿಸಲಾಗುವುದು ಎಂದು ಅವರು ರೈತರಿಗೆ ತಿಳಿಸಿದರು.

ಗಡಗೇರಿ ಗ್ರಾಮದ ಮನೆ ಹಾನಿ ಪ್ರದೇಶಕ್ಕೆ ಭೇಟಿ, ಪರಿಶೀಲನೆ; ಜಿಲ್ಲಾಧಿಕಾರಿಗಳು ಇಂದು ಮಧ್ಯಾಹ್ನ ಗುಡಗೇರಿ ಗ್ರಾಮದಲ್ಲಿ ಅತಿ ಮಳೆಯಿಂದಾಗಿ ಭಾಗಶಃ ಹಾನಿಗೊಳಗಾದ ಸುಮಾರು 20 ಕ್ಕೂ ಹೆಚ್ಚು ಮನೆಗಳಿಗೆ ಭೇಟಿ, ನೀಡಿ ಪರಿಶೀಲಿಸಿದರು. ಮತ್ತು ಸಂಭಂದಿಸಿದ ದಾಖಲೆಗಳನ್ನು ಪಡೆದು ತಕ್ಷಣವೇ ನಿಯಮಾನುಸಾರ ಬಾಧಿತರಿಗೆ ಪರಿಹಾರ‌ ನೀಡಲು ಕ್ರಮಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಗುಡಗೇರಿ ಗ್ರಾಮದ ಲಸಿಕಾ ಕೇಂದ್ರಕ್ಕೆ ಭೇಟಿ; ಲಸಿಕೆ ಕುರಿತು ಜಾಗೃತಿ: ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಗುಡಗೇರಿ ಗ್ರಾಮದ ಕುರಬಗೇರಿ ಓಣಿಯಲ್ಲಿ‌ ನಡೆದಿದ್ದ ಕೋವಿಡ್ ರೋಗನಿರೋಧಕ ಲಸಿಕಾಕರಣ ಸ್ಥಳಕ್ಕೆ ಭೇಟಿ ನೀಡಿ, ಲಸಿಕೆ ಪಡೆಯುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಡಾ.ಗೋಪಾಲಕೃಷ್ಣ ಬಿ., ತೋಟಗಾರಿಕೆ, ಕಂದಾಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ರೈತರು ಇದ್ದರು.
….

Related Articles

Leave a Reply

Your email address will not be published. Required fields are marked *

Back to top button