ಸ್ಥಳೀಯ ಸುದ್ದಿ

ಅಕಾಲಿಕ ಮಳೆಯಿಂದ ಬೆಳೆ ಹಾನಿಯಾದ ಪ್ರದೇಶಗಳಿಗೆ ಶಾಸಕ ಅಮೃತ ದೇಸಾಯಿ ಭೇಟಿ, ಪರಿಶೀಲನೆ

ಧಾರವಾಡ

ಅಕಾಲಿಕ ಮಳೆಯಿಂದ ಬೆಳೆ ಹಾನಿಯಾದ ತಾಲೂಕಿನ ವಿವಿಧ ಗ್ರಾಮಗಳ ರೈತರ ಹೊಲಗಳಿಗೆ ಶಾಸಕ ಅಮೃತ ದೇಸಾಯಿ ಅವರು ಇಂದು ಬೆಳಿಗ್ಗೆ ಭೇಟಿ ನೀಡಿ, ಪರಿಶೀಲಿಸಿದರು.
ತಾಲೂಕಿನ ಶಿವಳ್ಳಿ ಗ್ರಾಮದ ರೈತರಾದ ಮಾಯಪ್ಪ ಕುಪ್ಪಣ್ಣವರ ಮತ್ತು ಬಸವರಾಜ ಮೊರಬದ ಅವರ ಹೊಲಗಳಿಗೆ ಭೇಟಿ ನೀಡಿ ಹಾನಿ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಕಳೆದ ಮೂರು ವರ್ಷಗಳಲ್ಲಿ ಅತಿವೃಷ್ಠಿಯಿಂದ ರೈತರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದ ರೈತರ ಹೊಲದಲ್ಲಿನ ಮುಂಗಾರು ಹಂಗಾಮಿನ ಹತ್ತಿ, ಮೆಷಸಿಣಕಾಯಿ, ಈರುಳ್ಳಿ, ಹಿಂಗಾರು ಹಂಗಾಮಿನ ಗೋಧಿ, ಕಡಲೆ, ಜೋಳ,ಈರುಳ್ಳಿ ಇನ್ನಿತರ ಬೆಳೆಗಳು ಬಹುತೇಕ ನಾಶವಾಗಿವೆ. ಅಲ್ಲದೇ ಹಲವೆಡೆ ರಸ್ತೆಗಳು ಸಹ ಹಾನಿಗೊಂಡಿವೆ.
ಹೀಗಾಗಿ ರೈತರಿಗೆ ಅಪಾರ ಪ್ರಮಾಣದ ನಷ್ಟವುಂಟಾಗಿದೆ. ಯಾವುದೇ ಸರಕಾರ ಇದ್ದರೂ ರೈತನ ನಷ್ಟ ಭರಿಸಲು ಸಾಧ್ಯವಿಲ್ಲ. ಆದಾಗ್ಯೂ ನಮ್ಮ ಸರಕಾರ ರೈತರಿಗೆ ಸೂಕ್ತ ನೆರವು ನೀಡಲು ಸಿದ್ಧವಿದೆ. ಈ ದಿಸೆಯಲ್ಲಿ ತಾವು ಕೂಡ ಶಕ್ತಿ ಮೀರಿ ರೈತರಿಗೆ ನೆರವು ಒದಗಿಸಲು ಪ್ರಯತ್ನಿಸುವುದಾಗಿ ಅವರು ಹೇಳಿದರು.

ಇನ್ನೊಂದೆಡೆ ಪುಷ್ಪ ಕೃಷಿ ಕೈಕೊಂಡಿರುವ ಕುರುಬಗಟ್ಟಿ, ಮಂಗಳಗಟ್ಟಿ, ಲೋಕೂರು, ಶಿಬಾರಗಟ್ಟಿ ಇನ್ನಿತರ ಗ್ರಾಮಗಳ ರೈತರಿಗೆ ಮಳೆಯಿಂದ ಹಾನಿಯಾಗಿದೆ. ನಾಳೆ ಆ ಗ್ರಾಮಗಳ ರೈತರ ಹೊಲಗಳಿಗೂ ಭೇಟಿ ನೀಡುವುದಾಗಿ ಶಾಸಕರು ತಿಳಿಸಿದರು.

ಅಕಾಲಿಕ ಮಳೆಯಿಂದಾಗಿ ಬೆಳೆ ಹಾನಿ ಆಗಿರುವ ಕುರಿತು ಧಾರವಾಡ ತಾಲೂಕಿನಲ್ಲಿ ಕೃಷಿ, ಕಂದಾಯ, ತೋಟಗಾರಿಕೆ ಇಲಾಖೆ ಸಿಬ್ಬಂದಿ ಮತ್ತು ಇಂಜಿನಿಯರ್ ಇರುವ ತಂಡಗಳು ಪ್ರತಿದಿನ ಸಮೀಕ್ಷೆ ಕಾರ್ಯ ನಡೆಸುತ್ತಿವೆ. ನವೆಂಬರ್ 25 ರ ವರೆಗೆ ಮಾಡಿದ ಸಮೀಕ್ಷೆ ಪ್ರಕಾರ ಧಾರವಾಡ ಹೋಬಳಿಯಲ್ಲಿ 5429.20, ಅಮ್ಮಿನಭಾವಿ ಹೋಬಳಿಯಲ್ಲಿ 9839.36 ಮತ್ತು ಗರಗ ಹೋಬಳಿಯಲ್ಲಿ 3463.25 ಹೆಕ್ಟೇರ್ ಸೇರಿದಂತೆ ಒಟ್ಟು ಧಾರವಾಡ ತಾಲೂಕಿನಲ್ಲಿ 18731.81 ಹೆಕ್ಟೇರ್ ಜಮೀನದಲ್ಲಿರುವ ಬತ್ತ, ಗೋವಿನ ಜೋಳ, ಜೋಳ, ಉದ್ದು, ಹೆಸರು,ಹತ್ತಿ, ಮೆಣಸಿನಕಾಯಿ, ಈರುಳ್ಳಿ, ಹೂವು ಬೆಳೆ ನಾಶವಾಗಿವೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ತಹಸಿಲ್ದಾರ ಡಾ ಸಂತೋಷ ಬಿರಾದಾರ, ಸಹಾಯಕ ಕೃಷಿ ನಿರ್ದೇಶಕ ಸಿ.ಜಿ.ಮೇತ್ರಿ, ಅಮ್ಮಿನಭಾವಿ ಹೋಬಳಿ ಕಂದಾಯ ನಿರೀಕ್ಷಕ ಆನಂದ ಆನಿಕಿವಿ ಹಾಗೂ ಮುಖಂಡರಾದ ಗಂಗಾಧರ ಪಾಟೀಲಕುಲಕರ್ಣಿ, ಗುರನಾಥಗೌಡ ಗೌಡರ, ಸಂತೋಷಗೌಡ ಪಾಟೀಲ, ಶಿವು ಬೆಳಾರದ, ಬಸವರಾಜ ತಂಬಾಕದ, ಪರಮೇಶ್ವರ ಬಡಿಗೇರ, ರಾಜು ಮುದ್ದಿ ಸೇರಿದಂತೆ ವಿವಿಧ ರೈತರು ಉಪಸ್ಥಿತರಿದ್ದರು.

ಬಳಿಕ ಶಾಸಕ ಅಮೃತ ದೇಸಾಯಿ ಅವರು ಮಾರಡಗಿ, ಕೋಟೂರ, ಗುಳೇದಕೊಪ್ಪ ಮತ್ತಿತರ ಗ್ರಾಮಗಳ ರೈತರ ಜಮೀನು ಗಳಿಗೆ ಭೇಟಿ ನೀಡಿ, ಮಳೆಯಿಂದ ಹಾಳಾದ ಹೊಲ ಮತ್ತು ಬೆಳೆ, ರಸ್ತೆ, ಸೇತುವೆಗಳನ್ನು ಪರಿಶೀಲಿಸಿದರು.

Related Articles

Leave a Reply

Your email address will not be published. Required fields are marked *

Back to top button