ಹುಬ್ಬಳ್ಳಿ

ಅಪಘಾತದಲ್ಲಿ ಗಾಯಗೊಂಡ ಪೊಲೀಸ್ ಪೇದೆ ಸಾವು- ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರೀಯೆ

ಹುಬ್ಬಳ್ಳಿ: ತಾಲೂಕಿನ ಗಬ್ಬೂರ ಕ್ರಾಸ್ ಬಳಿ ನಡೆದ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಪೊಲೀಸ್ ಪೇದೆ ಕಿರಣ ನಿಂಗಪ್ಪ ಪಾಟೀಲ್ (28) ಶನಿವಾರ ತಡರಾತ್ರಿ ನಿಧನ ಹೊಂದಿದ್ದಾರೆ.

ಹುಬ್ಬಳ್ಳಿ ತಾಲೂಕು ಅದರಗುಂಚಿ ಗ್ರಾಮದ ನಿವಾಸಿ ಆಗಿದ್ದ ಕಿರಣ ಹುಬ್ಬಳ್ಳಿ ಪೊಲೀಸ್ ತರಬೇತಿ ಕೇಂದ್ರದಲ್ಲಿ ಕರ್ತವ್ಯದಲ್ಲಿದ್ದರು. ಡಿ. 9ರಂದು ಕರ್ತವ್ಯಕ್ಕೆ ತೆರಳುತ್ತಿದ್ದಾಗ ಬೈಕ್ ಸ್ಕಿಡ್ ಆಗಿಬಿದ್ದಿದ್ದರು. ಘಟನೆಯಲ್ಲಿ ಕಿರಣ ಅವರ ತಲೆಗೆ ಗಂಭೀರ ಗಾಯವಾಗಿತ್ತು. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಬದುಕುಳಿಯಲಿಲ್ಲ.

ಬಿಕ್ಕಿಬಿಕ್ಕಿ ಅತ್ತ ಸಹೋದ್ಯೋಗಿ ಸಿಬ್ಬಂದಿ:
ಕಳೆದ ಆರು ತಿಂಗಳ ಹಿಂದಷ್ಟೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಕಿರಣ ಸಾವು ಅವರ ಕುಟುಂಬದವರ ಆಕ್ರಂಧನ ಮುಗಿಲು ಮುಟ್ಟುವಂತೆ ಮಾಡಿದೆ. ಈ ಮದ್ಯೆ ಕಿರಣ ಸಾವು ಪೊಲೀಸ್ ತರಬೇತಿ ಕೇಂದ್ರದಲ್ಲಿನ ಪೊಲೀಸ್ ಸಿಬ್ಬಂದಿ ದುಖವನ್ನು ಇಮ್ಮಡಿಗೊಳಿಸಿದೆ. ಶನಿವಾರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯ ಕಿಮ್ಸ್ ಗೆ ದೌಡಾಯಿಸಿದ ಸಿಬ್ಬಂದಿ ಬಿಕ್ಕಿಬಿಕ್ಕಿ ಅತ್ತರು. ಬಸವರಾಜ ಎಂಬ ಸಿಬ್ಬಂದಿ ಊಟ- ನೀರು ಸೇವಿಸದೆ ಸ್ನೇಹಿತನ ಸಾವಿಗೆ ಶೋಕ ವ್ಯಕ್ತಪಡಿಸಿದರು. ಅಲ್ಲದೇ ಗ್ರಾಮದಲ್ಲಿನ ಅವರ ಬಾಲ್ಯ ಸ್ನೇಹಿತರು ವ್ಯಕ್ತಪಡಿಸಿದ ನೋವು ಕರಳು ಹಿಂಡುವಂತಿತ್ತು.

ಸರಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ:
ಕರ್ತವ್ಯಕ್ಕೆ ತೆರಳುತ್ತಿರುವಾಗಲೇ ಮೃತಪಟ್ಟಿದ್ದರಿಂದ ಸಕಲ ಸರಕಾರಿ ಗೌರವಗಳೊಂದಿಗೆ ಭಾನುವಾರ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಅದರಗುಂಚಿಯಲ್ಲಿ ಪೊಲೀಸ್ ಸಿಬ್ಬಂದಿ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ರಾಷ್ಟ್ರಗೀತೆ ಮೊಳಗಿಸಿದರು.‌ ಕುಟುಂಬಸ್ಥರು, ಸ್ನೇಹಿತರು, ಪೊಲೀಸ್ ಸಿಬ್ಬಂದಿ, ಗ್ರಾಮಸ್ಥರು ಅತ್ಯಂತ ದುಖದಲ್ಲಿಯೆ ಕಿರಣಗೆ ಅಂತಿಮ ವಿದಾಯ ಹೇಳಿದರು.

Related Articles

Leave a Reply

Your email address will not be published. Required fields are marked *

Back to top button