ಸ್ಥಳೀಯ ಸುದ್ದಿ

ಒಂದೆಡೆ ಪತ್ನಿ, ಮತ್ತೊಂದೆಡೆ ಮಗ ವಿನಯ್ ಕುಲಕರ್ಣಿ ಪರ ಅಬ್ಬರದ ಪ್ರಚಾರ

ಧಾರವಾಡ

ಮಾಜಿ ಸಚಿವ ಹಾಗೂ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಅವರ ಅನುಪಸ್ಥಿತಿಯಲ್ಲೂ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಒಂದೆಡೆ ಹಾಗೂ ಅವರ ಪುತ್ರ ಹೇಮಂತ ಕುಲಕರ್ಣಿ ಒಂದೆಡೆ ಅಬ್ಬರದ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ.

ಧಾರವಾಡ ತಾಲೂಕಿನ ತೇಗೂರು ಹಾಗೂ ಹಳೆತೇಗೂರು ಗ್ರಾಮಗಳಲ್ಲಿ ಶಿವಲೀಲಾ ಕುಲಕರ್ಣಿ ಅವರು ಮನೆ, ಮನೆ ಪ್ರಚಾರ ನಡೆಸುವ ಮೂಲಕ ವಿನಯ್ ಕುಲಕರ್ಣಿಗೆ ಈ ಬಾರಿ ಮತ ನೀಡುವಂತೆ ಮನವಿ ಮಾಡಿದರು. ತೇಗೂರು ಹಾಗೂ ಹಳೆತೇಗೂರು ಗ್ರಾಮಗಳಲ್ಲಿ ಶಿವಲೀಲಾ ಕುಲಕರ್ಣಿಯವರಿಗೆ ಉತ್ತಮ ಜನಬೆಂಬಲ ವ್ಯಕ್ತವಾಯಿತು.

ಇತ್ತ ಧಾರವಾಡದ ಮಲ್ಲಿಕಾರ್ಜುನನಗರ, ರೇಣುಕಾ ನಗರ, ರಾಹುಲ್ ಗಾಂಧಿನಗರಗಳಲ್ಲಿ ವಿನಯ್ ಕುಲಕರ್ಣಿ ಅವರ ಪುತ್ರ ಹೇಮಂತ ಕುಲಕರ್ಣಿ, ಕಾಂಗ್ರೆಸ್ ಮುಖಂಡರುಗಳಾದ ತವನಪ್ಪ ಅಷ್ಟಗಿ, ಅರವಿಂದ ಏಗನಗೌಡರ ಹಾಗೂ ವಿನಯ್ ಕುಲಕರ್ಣಿ ಸಹೋದರ ವಿಜಯ ಕುಲಕರ್ಣಿ ಬಿರುಸಿನ ಪ್ರಚಾರ ನಡೆಸಿದರು.

ಧಾರವಾಡದಲ್ಲಿ ವಿನಯ್ ಕುಲಕರ್ಣಿ ಪರ ಮತಯಾಚನೆ ಮಾಡಿ ಮಾತನಾಡಿದ ಹೇಮಂತ ಕುಲಕರ್ಣಿ, ನಮ್ಮ ತಂದೆಯವರ ಅನುಪಸ್ಥಿತಿಯಲ್ಲಿ ಇಂದು ನಾವು ಮತಯಾಚನೆಗೆ ಬಂದಿದ್ದೇವೆ. ಧಾರವಾಡ ಗ್ರಾಮೀಣ ಕ್ಷೇತ್ರದ ಎಲ್ಲ ಕಡೆಗಳಲ್ಲಿ ಉತ್ತಮ ಜನ ಬೆಂಬಲವಿದೆ. ನಮ್ಮ ತಂದೆಯವರು ಜಿಲ್ಲೆಯಿಂದ ಹೊರಗಿದ್ದರೂ ಅವರ ಮೇಲೆ ಜನ ಇಟ್ಟಿರುವ ಪ್ರೀತಿಯನ್ನು ನೋಡಿದರೆ ಅವರು ಈ ಬಾರಿ ನೂರಕ್ಕೆ ನೂರರಷ್ಟು ಗೆಲುವು ದಾಖಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅರವಿಂದ ಏಗನಗೌಡರ ಮಾತನಾಡಿ, ಇಂದು ವಿನಯ್ ಕುಲಕರ್ಣಿ ಜಿಲ್ಲೆಗೆ ಪ್ರವೇಶ ಮಾಡದೇ ಇರಬಹುದು ಆದರೆ, ಇಲ್ಲಿ ಪ್ರತಿಯೊಬ್ಬರೂ ವಿನಯ್ ಕುಲಕರ್ಣಿ ಎಂದು ಕೆಲಸ ಮಾಡುತ್ತಿದ್ದಾರೆ. ಜನರ ಈ ಪ್ರೀತಿ, ವಿಶ್ವಾಸ ನೋಡಿದರೆ ಅತೀ ಹೆಚ್ಚು ಮತಗಳ ಅಂತರದಿಂದ ವಿನಯ್ ಕುಲಕರ್ಣಿ ಅವರು ಗೆಲುವು ಸಾಧಿಸಲಿದ್ದಾರೆ ಎಂದರು.

ಒಟ್ಟಾರೆ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ವಿನಯ್ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ, ಮಕ್ಕಳು ಹಾಗೂ ಇಡೀ ಕಾರ್ಯಕರ್ತರು ಅಬ್ಬರದ ಪ್ರಚಾರ ಮಾಡುತ್ತಿದ್ದು, ಇದೊಂದು ಹೈವೋಲ್ಟೇಜ್ ಕ್ಷೇತ್ರವಾಗಿ ಮಾರ್ಪಟ್ಟಿದೆ.
ಈ ಸಂಧರ್ಭದಲ್ಲಿ,ಈಶ್ವರ ಶಿವಳ್ಳಿ,ಆತ್ಮಾನಂದ ಅಂಗಡಿ,ಮಂಜುನಾಥ ಸಾಲಿಮಠ,ಶಿವಯೋಗಿ ಹೊಸೂರ,ಬಸಯ್ಯ ಗಣಾಚಾರಿ,ಅಶೋಕ ಮೊರಬದ,ರವಿ ಹೊರಗಿನಮಠ,ಸಿದ್ದು ಮೂಖಯ್ಯನಮಠ,ಸೂರಜ ಪುಡಕಲಕಟ್ಟಿ,ಕಿಶೋರ ಬಡಿಗೇರ ಮುಂತಾದವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button