ಸ್ಥಳೀಯ ಸುದ್ದಿ

ಕುಡಿಯುವ ನೀರು ಘಟಕಗಳ ದುರಸ್ತಿ ತ್ವರಿತವಾಗಿ ಕೈಗೊಳ್ಳಬೇಕು -ಸಚಿವ ಹಾಲಪ್ಪ ಆಚಾರ್

ಧಾರವಾಡ

ಜಿಲ್ಲೆಯಲ್ಲಿ ಕುಡಿಯುವ ನೀರಿನ ಯೋಜನೆಯ ಶುದ್ಧ ಕುಡಿಯುವ ನೀರು ಘಟಕಗಳು ಸೇರಿದಂತೆ ದುರಸ್ತಿ ಇರುವ ಯಾವುದೇ ಜಲಮೂಲಗಳಲ್ಲಿ ಸಮಸ್ಯೆ ಕಂಡು ಬಂದ ಕೂಡಲೇ ಗರಿಷ್ಠ ಎಂಟು ದಿನಗಳೊಳಗೆ ಪರಿಹಾರ ಒದಗಿಸಿ ಜನರಿಗೆ ನೀರು ಪೂರೈಸಬೇಕು ಎಂದು ಗಣಿ,ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ,ಹಿರಿಯ ನಾಗರಿಕರ ಸಬಲೀಕರಣ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಹಾಲಪ್ಪ ಆಚಾರ ಹೇಳಿದರು.

ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಇಂದು ನಡೆದ 2021-22 ನೇ ಸಾಲಿನ ಮಾರ್ಚ್ ಅಂತ್ಯಕ್ಕೆ ಕೊನೆಗೊಂಡ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ(ಕೆಡಿಪಿ) ನಾಲ್ಕನೇ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು,

ಜಲಜೀವನ ಮಿಷನ್, ಜಲಧಾರೆ ಸೇರಿದಂತೆ ಮನೆ ಮನೆಗೆ ಕುಡಿಯುವ ನೀರು ಪೂರೈಕೆ ನಳಗಳ ಸಂಪರ್ಕ ಕಲ್ಪಿಸುವ ಯೋಜನೆ ಅನುಷ್ಠಾನ ಚುರುಕುಗೊಳ್ಳಬೇಕು,ಜಿಪಂ ಸಿಇಓ ಹಾಗೂ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಖುದ್ದು ಜವಾಬ್ದಾರಿ ನಿರ್ವಹಣೆ ಮಾಡಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು ಪೂರೈಸುವ ಶುದ್ಧ ಕುಡಿಯುವ ನೀರು ಘಟಕಗಳು ದುರಸ್ತಿ ಅಗತ್ಯ ಕಂಡು ಬಂದ ಕೂಡಲೇ ಗರಿಷ್ಠ ಎಂಟು ದಿನಗಳ ಅವಧಿಯಲ್ಲಿ ಸಮಸ್ಯೆ ಪರಿಹರಿಸಬೇಕು. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ರಸ್ತೆಗಳನ್ನು 10 ಟನ್ ಭಾರದ ವಾಹನಗಳ ಸಂಚಾರ ಸಾಮರ್ಥ್ಯಕ್ಕೆ ಅನುಗುಣವಾಗಿ ನಿರ್ಮಿಸಿರುತ್ತಾರೆ.ಅದಕ್ಕಿಂತಲೂ ಭಾರವಾದ ವಾಹನಗಳ ಸಂಚಾರದಿಂದ ರಸ್ತೆಗಳು ಕಡಿಮೆ ಅವಧಿಯಲ್ಲಿ ಹಾಳಾಗುವುದನ್ನು ತಡೆಯಲು, ಅಲ್ಲಿ ಸಂಚರಿಸುವ ವಾಹನಗಳ ಸಮೀಕ್ಷೆ ಮಾಡಿ ವರದಿ ಸಲ್ಲಿಸಿದರೆ ,ರಸ್ತೆ ನಿರ್ಮಾಣದ ಮಾನದಂಡಗಳನ್ನು ಪರಿಷ್ಕರಿಸಲು ಸರ್ಕಾರದ ಮಟ್ಟದಲ್ಲಿ ನಿರ್ಧರಿಸಲಾಗುವುದು ಎಂದರು.

ಕಲಘಟಗಿ ಶಾಸಕ ಸಿ.ಎಂ.ನಿಂಬಣ್ಣವರ ಮಾತನಾಡಿ, ಜಿಲ್ಲೆಯ ಹಲವೆಡೆ ಗ್ರಾಮೀಣ ಭಾಗಗಳಲ್ಲಿ ರೈತರು ಸಹಕಾರ ಸೊಸೈಟಿಗಳ ಮೂಲಕ ಹಲವಾರು ದಶಕಗಳಿಂದಲೂ ಕೃಷಿ ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ , ಭೂ ಒಡೆತನ ಸೊಸೈಟಿಯ ಹೆಸರಿನಲ್ಲಿ ಇರುತ್ತದೆ.ಉಳುಮೆ ಮಾಡುತ್ತಿರುವ ರೈತರಿಗೆ ಭೂ ಸುಧಾರಣೆ ಕಾಯ್ದೆಯಡಿ ಜಮೀನು ಹಸ್ತಾಂತರ ಮಾಡಲು ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗಬೇಕು.ಇದಕ್ಕಾಗಿ ಜಿಲ್ಲಾಧಿಕಾರಿಗಳು ಸೂಕ್ತ ಪ್ರಸ್ತಾವನೆ ಕಳಿಸಲಿ,ಜಿಲ್ಲಾ ಉಸ್ತುವಾರಿ ಸಚಿವರು ಮುತುವರ್ಜಿವಹಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದರು.

ಹುಬ್ಬಳ್ಳಿ ಧಾರವಾಡ (ಪೂರ್ವ) ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಸರ್ಕಾರದ ವಿವಿಧ ಸ್ವಯಂ ಉದ್ಯೋಗ ,ಸಹಾಯಧನ ಯೋಜನೆಗಳಡಿ ಸೌಲಭ್ಯಗಳು ಮಂಜೂರಾದ ಫಲಾನುಭವಿಗಳಿಗೆ ಬ್ಯಾಂಕುಗಳು ಸಾಲ ನೀಡಲು ಹಿಂದೇಟು ಹಾಕುವ ಅನೇಕ ಪ್ರಕರಣಗಳು ಜಿಲ್ಲೆಯಾದ್ಯಂತ ಸಾಕಷ್ಟು ಪ್ರಮಾಣದಲ್ಲಿವೆ.ಲೀಡ್ ಬ್ಯಾಂಕ್ ಅಧಿಕಾರಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಫಲಾನುಭವಿಗಳಿಗೆ ಆರ್ಥಿಕ ನೆರವು, ಸಾಲ ಮಂಜೂರಾತಿಗೆ ಬ್ಯಾಂಕುಗಳಿಗೆ ನಿರ್ದೇಶನ ನೀಡಬೇಕು ಎಂದರು.

ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಅವರು ಮಾತನಾಡಿ,ಪಿಎಂಇಜಿಪಿ,ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಬ್ಯಾಂಕುಗಳು ರಾಜ್ಯದಲ್ಲಿಯೇ ಗರಿಷ್ಠ ಸಾಲ ಮಂಜೂರು ಮಾಡಿ,ಹಣ ಬಿಡುಗಡೆ ಮಾಡಿವೆ.1 ಲಕ್ಷ 55 ಸಾವಿರ ಹೆಕ್ಟೇರ್ ಬೆಳೆ ಹಾನಿಯನ್ನು ಪರಿಹಾರ ತಂತ್ರಾಂಶದಲ್ಲಿ ದಾಖಲಿಸಲಾಗಿದೆ.ಎಲ್ಲರಿಗೂ ಪರಿಹಾರ ಬಿಡುಗಡೆಯಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ್,ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುರೇಶ ಇಟ್ನಾಳ, ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಆಯುಕ್ತ ಡಾ.ಬಿ.ಗೋಪಾಲಕೃಷ್ಣ,
ಡಿಸಿಪಿ ಸಾಹಿಲ್ ಬಾಗ್ಲಾ,ಜಿಲ್ಲಾ ಕೆಡಿಪಿ ಸಮಿತಿ ಸದಸ್ಯರು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button