ಕೆರೆಯಲ್ಲಿ ಈಜಲು ಹೋಗಿ ಮೂವರು ಯುವಕರು ನೀರುಪಾಲು
ಚಿತ್ರದುರ್ಗ: ಕೆರೆಯಲ್ಲಿ ಈಜಲು ಹೋಗಿದ್ದ ಮೂವರು ಯುವಕರು ನೀರುಪಾಲಾದ ಘಟನೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ನಂದನಹೊಸೂರು ಗ್ರಾಮ ಬಳಿಯ ಕೆರೆಯಲ್ಲಿ ನಡೆದಿದೆ.
ಐವರು ಈಜಲು ಹೋಗಿದ್ದು ಮೂವರು ನೀರುಪಾಲಾಗಿ ಇಬ್ಬರು ಪ್ರಾಣಾಪಾಯದಿಂದ ಬದುಕುಳಿದಿದ್ದಾರೆ. ನಂದನಹೊಸೂರು ಗ್ರಾಮದ ನಿವಾಸಿ ಗಿರೀಶ್(18), ಹೊರಕೆರೆದೇವರಪುರ ಗ್ರಾಮದ ಸಂಜಯ್(18), ಕಣಿವೆ ಜೋಗಿಹಳ್ಳಿ ಗ್ರಾಮದ ಮನು(19) ಮೃತರು.
ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಐವರು ಯುವಕರು ಪಿಯುಸಿ ಪರೀಕ್ಷೆಯನ್ನು ಮುಗಿಸಿ ಊರಿಗೆ ಬಂದಿದ್ದರು. ರಜೆ ಇದ್ದ ಕಾರಣ ಸ್ನೇಹಿತರೆಲ್ಲ ಸೇರಿಕೊಂಡು ಗುಂಡಿ ಕೆರೆಯಲ್ಲಿ ಈಜಲು ಹೋಗಿದ್ದರು. ಈ ವೇಳೆ ಕೆರೆಯ ಆಳ ತಿಳಿಯದೆ ಈಜಾಡಲು ಇಳಿದಿದ್ದು ಮುಳುಗಿದ್ದಾರೆ. ದಡ ಸೇರಲು ಸಾಧ್ಯವಾಗದೇ ಐವರಲ್ಲಿ ಮೂವರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಇನ್ನಿಬ್ಬರು ಅಪಾಯದಿಂದ ಪಾರಾಗಿದ್ದಾರೆ. ಸಾವಿನ ಸುದ್ದಿ ಕೇಳುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಪೊಲೀಸ್ ಇಲಾಖೆ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಕೆರೆಯಿಂದ ಹೊರತೆಗೆದಿದ್ದು, ವಿಷಯ ನೂರಾರು ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿದ್ದಾರೆ.