ಬೈರಿದೇವರಕೊಪ್ಪ ದರ್ಗಾ ತೆರವು: ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರ ಆಕ್ರೋಶ
ಧಾರವಾಡ
ಅನಾದಿ ಕಾಲದಿಂದಲೂ ಅಸ್ತಿತ್ವದಲ್ಲಿದ್ದ ಭೈರಿದೇವರಕೊಪ್ಪ ದರ್ಗಾ ತೆರವುಗೊಳಿಸಲು ಬಿಜೆಪಿ ಸರ್ಕಾರ ಮುಂದಾಗಿದ್ದು, ಚುನಾವಣೆಯ ಸಮಯದಲ್ಲಿ ಇಂತಹ ರಾಜಕೀಯ ಮಾಡುವುದು ಬಿಜೆಪಿ ನಾಯಕರಿಗೆ ಶೋಭೆ ತರುವಂಥದ್ದಲ್ಲ ಎಂದು ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಾಟಗರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದರ್ಗಾದಿಂದ ಯಾವುದೇ ತೊಂದರೆ ಆಗುತ್ತಿಲ್ಲ. ವಾಹನಗಳ ಸಂಚಾರಕ್ಕಾಗಲಿ, ಸಾರ್ವಜನಿಕರ ಓಡಾಟಕ್ಕಾಗಲಿ ಸಮಸ್ಯೆ ಇರಲಿಲ್ಲ. ಚುನಾವಣೆ ಬರುತ್ತಿರುವುದರಿಂದ ರಾಜಕೀಯ ಕಾರಣಕ್ಕಾಗಿ ತೆರವು ಮಾಡಲಾಗುತ್ತಿದೆ. ಉಣಕಲ್ ಸಿದ್ದಪ್ಪಜ್ಜನ ಗುಡಿ ಎದುರು ಪ್ಲೈ ಓವರ್ ನಿರ್ಮಿಸಿದಂತೆ, ಇಲ್ಲಿಯೂ ನಿರ್ಮಿಸಿ ದರ್ಗಾ ಉಳಿಸಬಹುದಿತ್ತು’ ಎಂದು ಕಿಡಿಕಾರಿದ್ದಾರೆ.
‘ಮಸೀದಿ, ಗುಡಿಗಳನ್ನು ತೆರವು ಮಾಡಿದ್ದರೆ ನಮ್ಮಿಂದ ಯಾವ ತಕರಾರು ಇರಲಿಲ್ಲ. ಅಲ್ಲಿರುವುದು ದರ್ಗಾ. ಧರ್ಮದ ಗುರುವನ್ನು ಜೀವಂತ ಸಮಾಧಿ ಮಾಡಿರುವ ಸ್ಥಳ. ಹಾಗಾಗಿ ತೆರವು ಮಾಡಬಾರದು. ಇದು ರಾಜಕೀಯ ಹುನ್ನಾರ ಎನ್ನುವುದು ಜನರಿಗೆ ಅರಿವಾಗುತ್ತಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ತಕ್ಕ ಪ್ರತಿಫಲವನ್ನು ಅನುಭವಿಸುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿ.ಆರ್.ಟಿ.ಎಸ್. ಹೆಸರಲ್ಲಿ ಬಿಜೆಪಿ ಷಡ್ಯಂತ್ರ ನಡೆಸುತ್ತಿದ್ದು, ಬೈರಿದೇವರಕೊಪ್ಪದಲ್ಲಿರುವ ಹಜರತ್ ಸೈಯದ್ ಮಹ್ಮದ್ ಶಾ ಖಾದ್ರಿ ದರ್ಗಾ ತೆರವು ಮಾಡುತ್ತಿದೆ’ ಎಂದು ಆರೋಪಿಸಿದ್ದಾರೆ.
‘ಜೀವಂತ ಸಮಾಧಿಯಾದ ಧರ್ಮದ ಮುಖಂಡರ ದರ್ಗಾ ತೆರವು ಮಾಡುತ್ತಿರುವುದು ಖಂಡನೀಯ. ಇದರ ಹಿಂದಿರುವ ವ್ಯಕ್ತಿಗಳಿಗೆ ಶಾಪ ತಟ್ಟದೇ ಇರದು’ ಎಂದು ಹೇಳಿದ್ದಾರೆ.
‘ಬಿ.ಆರ್.ಟಿ.ಎಸ್. ಮಾರ್ಗ ಕೆಲವೆಡೆ 18 ಮೀ, 20 ಮೀ, 37 ಮೀ ವಿಸ್ತೀರ್ಣವಿದೆ. ತೆರವು ಮಾಡುತ್ತಿರುವ ಬೈರಿದೇವರಕೊಪ್ಪದ ದರ್ಗಾ ಬಳಿ 45 ಮೀ. ವಿಸ್ತೀರ್ಣದ ಮಾರ್ಗವಿದ್ದರೂ, ತೆರವು ಏಕೆ? ಶಾಸಕ ಅರವಿಂದ ಬೆಲ್ಲದ ಅವರಿಗೆ ಸಂಬಂಧಿಸಿದ ಜಾಗ ಉಳಿಸಲು ಪೂರ್ವನಿಯೋಜಿತವಾಗಿ ನಡೆಸಿದ ಕಾರ್ಯವಿದು. ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಹಿಂದೂ-ಮುಸ್ಲಿಮರ ನಡುವೆ ವಿಷ ಬೀಜ ಬಿತ್ತುತ್ತಿದೆ’ ಎಂದು ಆರೋಪಿಸಿದರು.
ಆಡಳಿತಾರೂಢ ಬಿಜೆಪಿ ಸರ್ಕಾರ ಜಾತಿಗಳ ನಡುವೆ ವೈಷಮ್ಯ ಹಾಕುತ್ತಿದ್ದು, ಜನರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುತ್ತಿದೆ. ಈ ಮೂಲಕ ಸಾಮರಸ್ಯ ಹಾಳು ಮಾಡುವ ಕೆಲಸಕ್ಕೆ ಕೈಹಾಕಿದೆ. ದರ್ಗಾ, ಮಸೀದಿ, ದೇಗುಲ, ಚರ್ಚ್ ಯಾವುದೇ ಇದ್ದರೂ ಉಳಿಸುವ ಕಾರ್ಯವನ್ನು ಮಾಡಬೇಕು.
ಬಿಜೆಪಿಯವರು ಉದ್ದೇಶಪೂರ್ವಕವಾಗಿಯೇ ದರ್ಗಾ ತೆರವು ಮಾಡುತ್ತಿದ್ದಾರೆ. ದರ್ಗಾದಿಂದ ಸಂಚಾರಕ್ಕೆ ಯಾವುದೇ ತೊಂದರೆ ಇಲ್ಲ. ಅದಾಗ್ಯೂ ಉದ್ದೇಶಪೂರ್ವಕವಾಗಿಯೇ ದರ್ಗಾ ತೆರವು ಮಾಡಲು ನಿರ್ಧರಿಸಿರುವ ಕೋಮುವಾದಿ ಬಿಜೆಪಿ ಸರ್ಕಾರಕ್ಕೆ ದೇವರೇ ಪಾಠ ಕಲಿಸಲಿ ಎಂದರು.
ದೇಶದ ಅಭಿವೃದ್ಧಿ ಬಗ್ಗೆ ಹಾಗೂ ನಿರುದ್ಯೋಗ ನಿವಾರಣೆ ಬಗ್ಗೆ ಮಾತನಾಡುವುದನ್ನು ಬಿಟ್ಟು ಬೇಕಾಬಿಟ್ಟಿಯಾಗಿ ಇಂತಹ ಕೋಮುವಾದ ಸೃಷ್ಟಿಸುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.