ಸ್ಥಳೀಯ ಸುದ್ದಿ

ಜಲಮಂಡಳಿ ನೌಕರರ ಪರವಾಗಿ ಹೋರಾಟಕ್ಕೆ ನಿಂತ ಬಸವರಾಜ ಕೊರವರ್

ಧಾರವಾಡ

ಜಲಮಂಡಳಿ 358 ನೌಕರರಿಗೆ ಮೂರು ದಿನಗಳಲ್ಲಿ ಮರುನೇಮಕ ಹಾಗೂ ಸಂಬಳ ಬಿಡುಗಡೆಗೆ ಮಾಡದೇ ಹೋದ್ರೆ,
ಜ 30 ರಿಂದ ಧಾರವಾಡದ
ಮಹಾನಗರ ಪಾಲಿಕೆ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಜನಜಾಗೃತಿ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಬಸವರಾಜ ಕೊರವರ ಹೇಳಿದ್ರು.

ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಸವರಾಜ ಕೊರವರ್ ಜಲಮಂಡಳಿಯ 358 ನೌಕರರು ಕಳೆದ ಹಲವು ತಿಂಗಳಿಂದ ಸಂಬಳವು ಇಲ್ಲದೆ ಕೆಲಸವೂ ಇಲ್ಲದೆ ಪರದಾಡುತ್ತಿದ್ದಾರೆ. ಹೀಗಾಗಿ
ಮೂರು ದಿನಗಳಲ್ಲಿ ಎಲ್ಲಾ ನೌಕರರ ಮರುನೇಮಕ ಮಾಡಬೇಕು ಹಾಗೂ ಸಂಬಳ ಬಿಡುಗಡೆಗೆ ಗಡುವು ನೀಡುತ್ತೇವೆ. ಇಲ್ಲದಿದ್ದರೆ, ಮಹಾತ್ಮಗಾಂಧಿಯವರ ಹುತಾತ್ಮದಿನದಂದು ಜ. 30 ರಿಂದ ಧಾರವಾಡದ
ಮಹಾನಗರ ಪಾಲಿಕೆ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಆರಂಭಿಸುವುದು ಅನಿವಾರ್ಯ ಆಗಲಿದೆ ಎಂದು ಬಸವರಾಜ ಕೊರವರ ಎಚ್ಚರಿಕೆ ನೀಡಿದರು.

ಮೇಯರ್ ಈರೇಶ ಅಂಚಟಗೇರಿ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಎಲ್ ಆಂಡ್ ಟಿ ಕಂಪನಿಯ ಪರ ವಕಾಲತ್ತು ವಹಿಸಿದ್ದರಿಂದ ಸಮಸ್ಯೆ ಉಲ್ಬಣವಾಗಿದೆ ಎಂದು ಆರೋಪಿಸಿದರು.

ಈ ಬಗ್ಗೆ ಮಹಾನಗರ ಪಾಲಿಕೆ ಕಚೇರಿ ಎದುರು ಡಿ.19ರಂದು ಬೃಹತ್ ಹೋರಾಟ ನಡೆಸಿದಾಗ ಮೇಯರ್ ಈರೇಶ ಅಂಚಟಗೇರಿ ಅವರು ತಕ್ಷಣ ಸಂಬಳ ಬಿಡುಗಡೆಗೆ ಕ್ರಮ ಜರುಗಿಸುವುದಾಗಿ ಹಾಗೂ ಪುನರ್ ನೇಮಕ ಕುರಿತು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಭರವಸೆ ನೀಡಿದ್ದರು. ಆದರೆ ಅದರಂತೆ ನಡೆದುಕೊಂಡಿಲ್ಲ.

ಆನಂತರ ಈಗ ಮೊದಲ ಹಂತದಲ್ಲಿ 50 ನೌಕರರ ಮರುನೇಮಕಕ್ಕೆ ಆಯುಕ್ತರು ಕಂಪನಿಗೆ ಸೂಚಿಸಿದಾಗ ಅವರು ಸಮ್ಮತಿಸಿ ತೆಗೆದುಕೊಳ್ಳಲು ಮುಂದಾದರೆ, ಇದೀಗ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ತೆಗೆದುಕೊಳ್ಳುವ ಭರವಸೆ ನೀಡಿರುವುದು ಸರಿಯಲ್ಲ ಎಂದು ತೀವ್ರವಾಗಿ ಖಂಡಿಸಿದರು.

ಮಾಜಿ ಸಿಎಂ ಜಗದೀಶ ಶೆಟ್ಟರ್, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಧಾರವಾಡ ಪಶ್ಚಿಮ ಶಾಸಕ ಅರವಿಂದ ಬೆಲ್ಲದ ಅವರ ಮನೆಗೆ ಹೋಗಿ ವಸ್ತು ಸ್ಥಿತಿಯ ಕುರಿತು ಗಮನ ಸೆಳೆದಿದ್ದೇವೆ.
ಜಗದೀಶ್ ಶೆಟ್ಟರ್ ಅವರು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಅವರ ಸಮ್ಮುಖದಲ್ಲಿ ಜ.13 ರಂದು ಪಾಲಿಕೆ ಹಾಗೂ ಎಲ್ ಆಂಡ್ ಟಿ ಸಭೆ ನಡೆಸಿ ಪುನರ್ ನೇಮಕ ಮಾಡಿಕೊಳ್ಳುವ ಮೂಲಕ ಸಂಬಳ ಬಿಡುಗಡೆಗೆ ಜ. 16ರ ಒಳಗೆ ಸಮಸ್ಯೆಗಳನ್ನು ಬಗೆಹರಿಸಲು ಸೂಚಿಸಿದ್ದರು.

ಅದರಂತೆ ಮಹಾನಗರ ಪಾಲಿಕೆ ಆಯುಕ್ತರು ಮೊದಲ ಹಂತದಲ್ಲಿ 50 ನೌಕರರನ್ನು ಮರಳಿ ಸೇರ್ಪಡೆ ಮಾಡಿಕೊಳ್ಳಲು ಎಲ್ ಆಂಡ್ ಅವರಿಗೆ ಸೂಚಿಸಿದರು. ಆದರೆ, ಮೇಯರ್ ಅವರು ತಡೆಹಾಕಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಿರ್ಣಯ ತೆಗೆದುಕೊಂಡು ಕ್ರಮ ಜರುಗಿಸುವುದಾಗಿ ಹೇಳಿ ನಮ್ಮ ಜಲಮಂಡಳಿಯ 358 ನೌಕರರ ಬದುಕಿನ ಜೊತೆಗೆ ಚೆಲ್ಲಾಟವಾಡುತ್ತಿರುವುದು ಸರಿಯಾದ ಬೆಳವಣಿಗೆ ಅಲ್ಲ.
ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ.

ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ನೂರಾರು ನೌಕರರ ಬದುಕನ್ನು ಬೀದಿಗೆ ತಳ್ಳಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಇದರಿಂದಾಗಿ ಅವಳಿನಗರದ ಲಕ್ಷಾಂತರ ಜನತೆಗೆ ದಿನನಿತ್ಯ ನೀರಿನ ತೊಂದರೆ ಆಗುತ್ತಿದೆ. ಇಷ್ಟೆಲ್ಲಾ ಗಂಭೀರ ಸ್ವರೂಪದ ಸಮಸ್ಯೆ ಇದ್ದರೂ ಸರಕಾರದ ಆದೇಶವನ್ನು ಗಾಳಿಗೆ ತೂರಿದ ಮಹಾನಗರ ಪಾಲಿಕೆ ಹಾಗೂ ಎಲ್ ಆಂಡ್ ಟಿ ಕಂಪನಿಯು ತಕ್ಷಣವೇ ಮೂರು ದಿನದ ಒಳಗೆ ಇವರಿಗೆ ಪುನರ್ ನೇಮಕ ಮಾಡಿಕೊಳ್ಳುವ ಮೂಲಕ ಸಮಸ್ಯೆ ಬಗೆಹರಿಸಬೇಕು. ಜೊತೆಗೆ ತಕ್ಷಣ ಸಂಬಳ ಬಿಡುಗಡೆಗೊಳಿಸಬೇಕು. ಇಲ್ಲದಿದ್ದರೆ ಮಹಾನಗರ ಪಾಲಿಕೆ ಸಾಮಾನ್ಯ ಸಭೆಗೆ ಮುತ್ತಿಗೆ ಹಾಕಲಾಗುವುದು ಮತ್ತು ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಆರಂಭಿಸುವುದು ಅನಿವಾರ್ಯ ಆಗಲಿದೆ ಎಂದು ಜನಜಾಗೃತಿ ಸಂಘದಅಧ್ಯಕ್ಷರಾದ ಬಸವರಾಜ ಕೊರವರ ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜನಜಾಗೃತಿ ಸಂಘದ ಉಪಾಧ್ಯಕ್ಷ ನಾಗರಾಜ ಕಿರಣಗಿ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ, ಜಲಮಂಡಳಿಯ ಹಂಗಾಮಿ ನೌಕರರ ಸಂಘದ ಅಧ್ಯಕ್ಷ ಮಹಾಂತೇಶ ಗೌಡರ, ಆನಂದ ಕಾಳಮ್ಮನವರ, ಪ್ರದೀಪ ಮಾಡೋಳ್ಳಿ, ಮಹೇಶ ಮೇಲಿನಮನಿ, ಶೇಖಣ್ಣ ಬೇಟಗೇರಿ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button