ರಾಜಕೀಯರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ

ಪತ್ರಕರ್ತನ ಬಂಧನದ ಹಿಂದಿರುವ ಮಸಲತ್ತೇನು?

ಐಪಿ ಎಸ್ ಅಧಿಕಾರಿಯ ರಿವೆಂಜ್ ಇದು ನಡೇನಾ?

ಧಾರವಾಡದ ಪತ್ರಕರ್ತ ಮೆಹಬೂಬ್ ಮುನವಳ್ಳಿಯ ಬಂಧನ ಖಂಡನಾರ್ಹ.

ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ, ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ, ಗೃಹಮಂತ್ರಿಗಳು ಕರ್ನಾಟಕ ಸರ್ಕಾರ, ಅಧ್ಯಕ್ಷರು ಮಾನವ ಹಕ್ಕುಗಳ ಆಯೋಗ, ರಾಜ್ಯಾಧ್ಯಕ್ಷರು ಪತ್ರಿಕಾ ಸಂಘಟನೆಗಳು ಇಂತಿವರುಗಳಿಗೆ ಬಹಿರಂಗ ಪತ್ರ!

(ಪತ್ರಕರ್ತ ಮೆಹಬೂಬ್ ಮುನವಳ್ಳಿಯನ್ನು ಬಿಡುಗಡೆಗೊಳಿಸಿ ಒತ್ತಾಯ)

ಪತ್ರಿಕಾ ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಖ್ಯಾನ, ಹಾಗೂ ಮಾನವ ಹಕ್ಕುಗಳ ಕುರಿತಾಗಿ ಪೊಲೀಸ್ ವಲಯದಿಂದ ತಾತ್ವಿಕ ಸಲಹೆಗಳನ್ನು ಸ್ವೀಕರಿಸುವ ಹೊತ್ತು ಪತ್ರಿಕಾಂಗದ ಮುಂದಡಿ ಇದಿಯಾ..? ಎನ್ನುವ ಪ್ರಶ್ನೆಯೊಂದು ಇತ್ತೀಚಿನ ಒಂದಿಷ್ಟು ಪ್ರಕರಣಗಳಲ್ಲಿ ಕಂಡು ಬಂದಿದೆ. ೧೫-೦೩-೨೦೨೩ರಂದು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಚೀಲೂರು ಬಳಿಯಿರುವ ಗೋವಿನಕೋವಿ ಬಳಿ ರೌಡಿ ಶೀಟರ್ ಹಂದಿ ಅಣ್ಣಿ ಕೊಲೆಯ ಪ್ರತಿಕಾರವಾಗಿ ರೌಡಿ ಶೀಟರ್‌ಗಳಾದ ಮಧು ಮತ್ತು ಆಂಜನೇಯನ ಮೇಲೆ ನಡೆದ ಮಾರಣಾಂತಿಕ ಹಲ್ಲೆಯ ದಾಳಿಯಲ್ಲಿ ಓರ್ವ ಸ್ಥಳದಲ್ಲಿಯೇ ಕೊನೆಯುಸಿರೆಳೆದ ಮತ್ತೋರ್ವ ರೌಡಿ ಶಿಟರ್ ಮಚ್ಚಿನೇಟಿಗೆ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿಯುತ್ತಿದ್ದಾನೆ.ಇಂತಿವ ಘಟನೆಯಲ್ಲಿ ಹಲ್ಲೆ ಮಾಡಿದ ನಾಲ್ವರು ಹಾವೇರಿ ಜಿಲ್ಲೆಯ ಶಿಗ್ಗಾಂವ್ ಪೊಲೀಸರಿಗೆ ಶರಣಾಗಿರುವ ಸುದ್ದಿ ಹೊರ ಬಿದ್ದಿತ್ತು.

ಆದರೆ ಕೊಲೆ ನಡೆದ ಸರಹದ್ದಿನ ನ್ಯಾಮತಿ ಪೊಲೀಸರು ತನಿಖೆ ಕೈಗೊಂಡು ಬ್ರೇಕಿಂಗ್ ಸುದ್ದಿ ಪ್ರಕಟಗೊಂಡ ಅಂತರ್ಜಾಲದ ಸಂಪರ್ಕ ಸಾಧಿಸಿದ್ದರು. ಅಲ್ಲದೆ ಶಿಗ್ಗಾಂವ್ ಪೊಲೀಸರ ಬಳಿ ಆರೋಪಿಗಳು ಶರಣಾಗತಿಯಾಗಲು ಸಹಾಯ ಮಾಡಿದ್ದಾರೆ ಎಂದು ಸಂಶಯಪಟ್ಟ ದಾವಣಗೆರೆ ಎಸ್ ಪಿ ರಿಷ್ಯಂತ ಟೀಮ್ ರೆಡಿ ಮಾಡಿ ಧಾರವಾಡದ ಜನಪರವಾದಿ ಪತ್ರಕರ್ತರಾದ ಮೆಹಬೂಬ್ ಮುನವಳ್ಳಿಯವರನ್ನು ಬಂಧಿಸಿರುವುದು ಖಂಡನಾರ್ಹವಲ್ಲವೇ ಎಂಬುದನ್ನು “ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ” ತಮ್ಮ ಆವಗಾಹನೆಗೆ ತರಬಯಸುತ್ತೇನೆ.
ಅಪರಾಧಿಗೊಳಂದಿಗೆ ಸಂಪರ್ಕ ಇರಬಾರದು ಎನ್ನುವ ಪೊಲೀಸ್ ಕಾನೂನು ಇದಿಯಾ..? ಸಂಪರ್ಕ ಹೊಂದಿದ್ದರೆ ಅದೊಂದು ಸುದ್ದಿಗಾಗಿ ಮಾತ್ರ ಎನ್ನುವುದು ಯಾಕೆ ಗ್ರಹಿಸಿಕೊಳ್ಳುವುದಿಲ್ಲ.ಈ ದೇಶದ ಒಳಿತು,ಕೆಟ್ಟದರ ಹಿಂದಿನ ಸಂಪರ್ಕ ಜೀವಪರ ನಿಲುವುಳ್ಳದಾಗಿದ್ದರೆ,ಅದ್ಹೇಗೆ ಅಪರಾಧವೆಂದು ಪರಿಗಣಿತವಾಗುತ್ತದೆ, ಹೀಗಿರುವಾಗ ಒಬ್ಬ ವರದಿಗಾರ ಗಾಗಿ ಯಾರೊಂದಿಗಾದರು ಸಂಪರ್ಕ ಇರಬಹುದೇ ವಿನಃ ಸಂಬಂಧಗಳು ಇರಬಾರದು ಎನ್ನುವುದು ನ್ಯಾಮತಿ ಪೊಲೀಸರಿಗೆ ತಿಳಿದಿಲ್ಲವೇ..?! ಇನ್ನೂ ಅಪರಾಧಿಗಳನ್ನು ಶರಣಾಗತಿ ಮಾಡಿಸಲು ಸಹಾಯ ಮಾಡಿದರು ಎನ್ನುವ ಆರೋಪಗಳ ಹಿಂದಿನ ಬಗೆಯನ್ನು ತಿಳಿಯಬೇಕಲ್ಲವೇ..? ಯಾವ ಪೊಲೀಸ್ ನೋಟಿಸ್ ಇಲ್ಲದೆ, ಪ್ರಾಥಮಿಕ ಹಂತದ ವಿಚಾರಣೆ ನಡೆಸದೆ ಬಂಧಿಸಿರುವುದು ಅಸಾಂವಿಧಾನಿಕವಾಗಿದೆ.

ಸಿ ಎಮ್ ಬಸವರಾಜ್ ಬೊಮ್ಮಾಯಿ ಜೊತೆ ಪತ್ರ ಕರ್ತ ಮೆಹಬೂಬ್

ಸಂಪರ್ಕ ಹಾಗೂ ಶರಣಾಗತಿಗೆ ಸಹಾಯ ಮಾಡಿದನ್ನು ಆರೋಪಿಸುವುದಾದರೆ ಮೊದಲು ನೋಟಿಸ್ ನೀಡುವುದೋ..? ಅಥವಾ ವಿಚಾರಣೆ ನಡೆಸುವುದೋ..? ಮಾಡದೆ ಅಥವಾ ಈ ಪ್ರಕರಣದಲ್ಲಿ ಸಾಕ್ಷಿಯಾಗಿ ಲಗತ್ತಿಸಬಹುದಾದ ಎಲ್ಲಾ ಸಾಂದರ್ಭಿಕತೆಗಳನ್ನು ತಳ್ಳಿ ಇನ್ನೋರ್ವ ರೌಡಿ ಶೀಟರ್‌ನಂತೆ ಪತ್ರಕರ್ತ ಮೆಹಬೂಬ್ ಮುನವಳ್ಳಿಯನ್ನು ಬಂಧಿಸಿರುವುದು ಅಭಿವ್ಯಕ್ತಿ ಹಾಗೂ ಜೀವಪರ ನಿಲುವನ್ನು ವಿರೋಧಿಸದಂತೆ ಎನ್ನುವುದು ತಮಗೆ ತಿಳಿಸಬಯಸುವೆ. ಯಾವುದೇ ಘಟನೆಗಳ ನಂತರ ಸಂಪರ್ಕ ಸಾಧಿಸುವ ಅನೇಕತೆಗಳಲ್ಲಿ ಸುದ್ದಿಗಾಗಿ ಹವಣಿಸುವ ಪತ್ರಕರ್ತರು ಅದ್ಯಾಗೆ ಆರೋಪಿಯಾಗಿ ನಿಲ್ಲುತ್ತಾರೆ..?! ಘಟನೆಯ ಮುನ್ನದಿ ಸಂಪರ್ಕ, ಚರ್ಚೆ, ಇದ್ದೊಡೆ ಇದೊಂದು ಅಪರಾಧ ಎನ್ನಬಹುದೇ ವಿನಃ ನಂತರದ ಸಂಪರ್ಕಗಳು ಸುದ್ದಿಗಾಗಿ ಎನ್ನುವ ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಅರಿಯದೆ ನ್ಯಾಮತಿ ಪೊಲೀಸರು ತನಿಖೆಯ ನೆವದಲ್ಲಿ ಓರ್ವ ಜನಪರ ನಿಲುವುಳ್ಳ ಮೆಹಬೂಬ್ ಮುನವಳ್ಳಿಯನ್ನು ರೌಡಿ ಶೀಟರ್ ರೀತಿಯಲ್ಲಿ ಬಂಧಿಸಿರುವುದು ಸಾಂವಿಧಾನಿಕವಲ್ಲವಾಗಿದೆ.

ಮಾಜಿ ಸಿ ಎಮ್ ಎಚ್ ಡಿಕೆ ಜೊತೆ ಸಂದರ್ಶನದಲ್ಲಿ

ಈ ರೀತಿಯ ಶರಣಾಗತಿ ಪ್ರಕರಣಗಳು ರಾಜ್ಯದಲ್ಲಿ ನಡೆದೆ ಇಲ್ಲವೇ..? ಇದೇ ರೌಡಿ ಶೀಟರ್ ಹಂದಿ ಅಣ್ಣಿ ಮತ್ತು ಅವನ ಗ್ಯಾಂಗು ನಡೆಸಿದ ಲವ-ಕುಶ ಎನ್ನುವ ಅವಳಿ ರೌಡಿಗಳ ಮರ್ಡರ್ ಪ್ರಕರಣದ ನಂತರ ಹಾಯ್ ಬೆಂಗಳೂರು ಕಛೇರಿಯನ್ನು ಸಂಪರ್ಕ ಹೊಂದಿದ್ದರು ಈ ನಂತರ ಪತ್ರಕರ್ತ ರವಿ ಬೆಳೆಗೆರೆ ಆರೋಪಿಗಳನ್ನು ಶರಣಾಗತಿ ಮಾಡಿಸುವಲ್ಲಿ ಯಶಸ್ವಿಯು ಆಗಿದ್ದರು ಆದರೆ ಅಂದಿನ ಶಿವಮೊಗ್ಗದ ಎಸ್ಪಿ ಅರುಣ್ ಚಕ್ರವರ್ತಿಯವರು ನೋಟಿಸ್ ನೀಡಿ ವಿಚಾರಣೆ ನಡೆಸಿ ಪತ್ರಕರ್ತ ರವಿ ಬೆಳೆಗೆರೆಯನ್ನು ಸಾಕ್ಷಿಯಾಗಿ ಪ್ರಕರಣದಲ್ಲಿ ಲಗತ್ತಿಸಿದ್ದರೇ ವಿನಃ ಬಂಧಿಸಿರಲಿಲ್ಲ, ಇಂತಹ ಅನೇಕ ಘಟನೆಗಳು ರಾಜ್ಯದಲ್ಲಿ ಸಂಭವಿಸಿದೆ.

ಯಾವುದೇ ಪತ್ರಕರ್ತನಾಗಿರಲಿ ಪತ್ರಿಕಾ ಧರ್ಮದ ತಳಹದಿಯಲ್ಲಿ ಚಿಂತನೆ ನಡೆಸಬೇಕಾದ ಜರೂರತ್ತಿದೆ ಆದರೆ ಕರ್ನಾಟಕದ ಅನೇಕ ಪತ್ರಿಕಾ ಸಂಘಟನೆಗಳು ಯಾಕೆ ಇದೊಂದು ಅಸಾಂವಿಧಾನಿಕ ಬಂಧನ ಎಂದು ಅರಿತು ಪ್ರತಿಭಟಿಸದೇ ಮೌನವಾಗಿದಿಯೋ..? ಆದರೆ ಒಂದಿಷ್ಟು ಜನಪರ ಪತ್ರಕರ್ತರು ಮೆಹಬೂಬ್ ಮುನವಳ್ಳಿಯ ಮೇಲಿನ ಬಂಧನವನ್ನು ಖಂಡಿಸಿರುವುದು ಇದರ ಸಂಖ್ಯೆಯು ಮುಂದಿನ ದಿನಗಳಲ್ಲಿ ಹೆಚ್ಚಾಗುವುದರಲ್ಲಿ ಯಾವುದೇ ನಿಸ್ಸಂದೇಹವಿಲ್ಲವಾಗಿದೆ.

ಇನ್ನೂ ಪೊಲೀಸರು ಮತ್ತು ಪತ್ರಕರ್ತರು ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಎನ್ನುವ ಬಹುತೇಕಗಳಲ್ಲಿ ಇಂತಹ ಘಟನೆಗಳು ಕಾನೂನು ರಿತ್ಯಾವೇ ಎನ್ನುವುದು ದಾವಣಗೆರೆಯ ಎಸ್ಪಿಯಾಗಿರುವ ರಿಷ್ಯಂತ್‌ರವರೇ ಉತ್ತರಿಸಬೇಕಿದೆ. ನನಗೊತ್ತಿರುವಂತೆ ಪೊಲೀಸ್ ತನಿಖೆಗಳಿಗೆ ಅಪರಾಧಿಗಳನ್ನು ಗುರುತಿಸುವಿಕೆಯಲ್ಲಿ ಒಂದಿಷ್ಟು ಸೂಕ್ಷ್ಮ ಮಾಹಿತಿಗಳನ್ನು ಪೊಲೀಸರಿಗೆ ನೀಡುವ ಕೆಲಸಗಳನ್ನು ಪತ್ರಕರ್ತರು ಮಾಡುತ್ತಲೇ ಇರುತ್ತಾರೆ, ಇದು ಜನಸ್ನೇಹಿ ಪೊಲೀಸ್ ಕರ್ತವ್ಯಕ್ಕೆ ಅದೆಷ್ಟೋ ಸಹಕಾರಿಯಾಗಿದೆ, ಇದಲ್ಲದೆ ಕ್ರೈಂ ವರದಿ ಮಾಡುವ ಪತ್ರಕರ್ತರಿಗೆ ಭೂಗತ ಸಂಪರ್ಕವಿದ್ದಂತೆ ರಾಜ್ಯದ ಕ್ರೈಂ ಪೊಲೀಸ್ ಸಿಬ್ಬಂದಿಗಳಿಗೂ ಇದ್ದೆ ಇದೆ, ಆಗಾದರೆ ಇಲ್ಲಿ ತಿಳಿದುಕೊಳ್ಳಬೇಕಾದುದ್ದು ಸಂಪರ್ಕವೇ..? ಅಥವಾ ಸಂಬಂಧವೇ..? ಎಂದು ಅಲ್ಲವೇ..?

ಅಮೆರಿಕಾದ ಎರಡು ಗಗನಚುಂಬಿ ಕಟ್ಟಡಗಳಿಗೆ ವಿಮಾನವನ್ನು ಹೈ-ಜಾಕ್ ಮಾಡಿ ಡಿಕ್ಕಿ ಹೊಡೆಸಿದ ಪ್ರಕರಣದಲ್ಲಿ ಉಗ್ರಗಾಮಿ ಬಿನ್‌ಲಾಡೆನ್ ಕಣ್ಮರೆಯಾಗುತ್ತಾನೆ, ಆತನನ್ನು ಹುಡುಕುವ ವೇಗದಲ್ಲಿ ಅಮೇರಿಕಾ ಸರ್ಕಾರವಿರುತ್ತದೆ ಎಲ್ಲಾ ಟೆಕ್ನಾಲಜಿಗಳ ಸಹಾಯನ್ನು ಬಳಸಿಕೊಂಡಿರುತ್ತದೆ ಆದರೂ ಆತ ಸುಳಿವು ಸಿಕ್ಕಿರುವುದಿಲ್ಲ ಆದರೆ ನಿಗೂಢ ಸ್ಥಳದಲ್ಲಿದ್ದುಕೊಂಡು ತನ್ನ ಹೇಳಿಕೆಗಳ ವೀಡಿಯೋವನ್ನು ದುಬೈನ ಅಲ್‌ಜಜಿರಾ ನ್ಯೂಸ್ ಟಿವಿಗೆ ರವಾನಿಸುತ್ತಾನೆ, ಅಮೇರಿಕಾ ದೇಶದ ಆಡಳಿತ ವ್ಯವಸ್ಥೆ ಅಲ್‌ಜಜಿರಾ ಟಿವಿಯ ಮೇಲೆ ದಾಳಿ ನಡೆಸಿತ್ತಾ..? ಹೇಳಿ ಅದೊಂದು ಜಗತ್ತಿನ ಪತ್ರಿಕಾ ಅಭಿವ್ಯಕ್ತಿ ಸ್ವಾತಂತ್ರ್ಯ, ಇನ್ನೂ ಉದಾಹರಣೆ ಎಂದರೆ ರಾಜ್ಯದಲ್ಲಿ ದಾದಸಾಹೇಬ್ ಪಾಲ್ಕೆ ಪ್ರಶಸ್ತಿ ವಿಜೇತ, ಕನ್ನಡದ ಕುಲತಿಲಕ ಡಾ. ರಾಜಕುಮಾರ್‌ರವರನ್ನು ಗಾಜನೂರಿನ ಮನೆಯಿಂದ ಅಪಹರಿಸಿದ್ದ ಕಾಡುಗಳ್ಳ ನರಹಂತಹ ವೀರಪ್ಪನ್‌ನೊಂದಿಗೆ ಸಂಪರ್ಕ ಸಾಧಿಸಿ ಎರಡು ರಾಜ್ಯಗಳಲ್ಲಿ ತಲೆದೋರಿದ್ದ ಸಮಸ್ಯೆಗೆ ಇತಿ ಹಾಡಿ ಮತ್ತೇ ರಾಜಕುಮಾರ್‌ರವರನ್ನು ಸುರಕ್ಷಿತವಾಗಿ ಕರೆತರುವಲ್ಲಿ ಯಶಸ್ವಿಯಾದವರು ನಕ್ಕೀರನ್ ಪತ್ರಿಕೆಯ ಪತ್ರಕರ್ತನಲ್ಲವೇ..?! ಅದಾಗ ನಕ್ಕೀರನ್ ಮೇಲೆ ದಾಳಿ ನಡೆಸಿ ಬಂಧಿಸಿ ಜೈಲಿಗೆ ಕಳಿಸಿದ್ರಾ ಅಥವಾ ಬಹುಮಾನ ನೀಡಿದ್ರಾ..? ಹೇಳಿ.

ಏನೇ ಆಗಲಿ ಘಟನೆಯ ನಂತರ ಸುದ್ದಿ ಸಂಪರ್ಕಕ್ಕಾಗಿ ಪತ್ರಕರ್ತ ಮೆಹಬೂಬ್ ಮುನವಳ್ಳಿ ಮುಂದಾಗಿದ್ದರೆ, ಅಥವಾ ಸುದ್ದಿ ಮೂಲಗಳ ಪ್ರಕಾರ ನಕಲಿ ಎನ್ಕೌಂಟರ್‌ನಿಂದ ತಪ್ಪಿಸುವುದಕ್ಕಾಗಿಯೋ..? ಶರಣಾಗತಿಯಲ್ಲಿ ಸಹಾಯ ಮಾಡಿದ್ದಾದರೆ ಅದರ ವಿಚಾರಣೆ ನಡೆಸಲು ಪೊಲೀಸರು ನೋಟಿಸ್ ನೀಡಿ ವಿಚಾರಿಸಬಹುದೇ ವಿನಃ ರೌಡಿ ಶೀಟರ್‌ನಂತೆ ಪತ್ರಕರ್ತನನ್ನು ಪರಿಗಣಿಸಿ ಬಂಧಿಸಿರುವುದು ಸಾಂವಿಧಾನಿಕವಲ್ಲವಾಗಿದೆ ಹೀಗಾಗಿ ಸಂಬಂಧಿಸಿದ ಹಾಗೂ ಶೀರ್ಷಿಕೆಯಲ್ಲಿರುವ ಇಲಾಖಾಧಿಕಾರಿಗಳಾಗಲಿ, ಆಡಳಿತ ವ್ಯವಸ್ಥೆಗಳಾಗಲಿ, ಪ್ರೆಸ್ ಕೌನ್ಸಿಲ್ ಆಪ್ ಇಂಡಿಯವಾಗಲಿ ಪತ್ರಕರ್ತನ ಬಂಧನದ ಪ್ರಕರಣವನ್ನು ಮರು ಪರಿಶೀಲಿಸಲಿ ಎನ್ನುವುದು ಸಾಂವಿಧಾನಿಕ ಅಭಿವ್ಯಕ್ತಿಯ ಈ ಸಾಲುಗಳ ಅಂಬೋಣವಾಗಿದೆ.
-ಗಾರಾ.ಶ್ರೀನಿವಾಸ್

Related Articles

Leave a Reply

Your email address will not be published. Required fields are marked *

Back to top button