ಸ್ಥಳೀಯ ಸುದ್ದಿ

ಹೆಬ್ಬಳ್ಳಿಯಲ್ಲಿ ಶಿವಲೀಲಾ ಕುಲಕರ್ಣಿ ಭರ್ಜರಿ ರೋಡ್ ಶೋ: ನಿಖೇತರಾಜ್ ಮೌರ್ಯ ಸಾಥ್

ಧಾರವಾಡ

ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಗುರುವಾರ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಅವರ ಪರವಾಗಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಅವರು ಭರ್ಜರಿ ರೋಡ್ ಶೋ ನಡೆಸಿದರು. ಇವರಿಗೆ ಕೆಪಿಸಿಸಿ ವಕ್ತಾರ ನಿಖೇತರಾಜ್ ಮೌರ್ಯ ಸಾಥ್ ನೀಡಿದರು.

ಹೆಬ್ಬಳ್ಳಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ತೆರೆದ ವಾಹನದ ಮೂಲಕ ಶಿವಲೀಲಾ ಅವರು ಮೆರವಣಿಗೆ ನಡೆಸಿದರು. ಮೆರವಣಿಗೆಯಲ್ಲಿ ನೂರಾರು ಜನ ಯುವಕರು ಹಾಗೂ ವಿನಯ್ ಅವರ ಬೆಂಬಲಿಗರು ಪಾಲ್ಗೊಂಡು ವಿನಯ್ ಪರ ಘೋಷಣೆಗಳನ್ನು ಕೂಗಿದರು. ಅಲ್ಲದೇ ಪ್ರತಿಯೊಬ್ಬರೂ ವಿನಯ್ ಕುಲಕರ್ಣಿ ಅವರ ಮುಖವಾಡ ಹಾಕಿಕೊಂಡು ಗಮನಸೆಳೆದರು.

ಅದ್ಧೂರಿ ರೋಡ್ ಶೋ ನಂತರ ಬಸ್ ನಿಲ್ದಾಣದಲ್ಲಿ ಜಮಾಯಿಸಿದ ಜನರನ್ನುದ್ದೇಶಿಸಿ ಮಾತನಾಡಿದ ಶಿವಲೀಲಾ ಕುಲಕರ್ಣಿ, ಈಗಿನ ಬಿಜೆಪಿ ಶಾಸಕರ ಅವಧಿಯಲ್ಲಿ ಕೊಲೆಗಳು ದೌರ್ಜನ್ಯಗಳು ಆಗೇ ಇಲ್ಲವೇ? ಬಿಜೆಪಿ ನಾಯಕರು ಮೋದಿ ಅವರನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದಾರೆ. ಅವರು ತಾವು ಮಾಡಿದ ಅಭಿವೃದ್ಧಿ ಕೆಲಸದ ಆಧಾರದ ಮೇಲೆ ಮತ ಕೇಳಲು ಅವರಿಗೆ ಆಗುತ್ತಿಲ್ಲ. ಐದು ವರ್ಷದ ಅವಧಿಯಲ್ಲಿ ಇವರು ಮಾಡಿದ ಅಭಿವೃದ್ಧಿ ಕೆಲಸಗಳು ಜಗಜ್ಜಾಹಿರ ಆಗಿವೆ ಅದೇ ಕಾರಣಕ್ಕೆ ಹೋದ ಕಡೆಯಲ್ಲೆಲ್ಲ ಸಾರ್ವಜನಿಕರು ಛೀಮಾರಿ ಹಾಕುತ್ತಿದ್ದಾರೆ ಎಂದರು.

ವಿನಯ್ ಕುಲಕರ್ಣಿ ಅವರ ಅವಧಿಯಲ್ಲಿ ಆದ ಅಭಿವೃದ್ಧಿ ಕೆಲಸಗಳನ್ನು ಜನ ಇನ್ನೂ ಮರೆತಿಲ್ಲ. ಅವರು ಕ್ಷೇತ್ರದಲ್ಲಿ ಇಲ್ಲ ಎಂದರೂ ಪ್ರತಿಯೊಬ್ಬರೂ ವಿನಯ್ ಕುಲಕರ್ಣಿ ಎಂದು ಕೆಲಸ ಮಾಡುತ್ತಿದ್ದಾರೆ. ಇಂದು ಕ್ಷೇತ್ರದಲ್ಲಿ ಅವರ ಜಾಗದಲ್ಲಿ ನಿಂತು ನಾನು ಕೆಲಸ ಮಾಡುತ್ತಿದ್ದೇನೆ. ನೀವು ಕರೆದಾಗೆಲ್ಲ ನಿಮ್ಮ ಮನೆಗೆ ಬಂದಿದ್ದೇನೆ. ನನಗೆ ನೀವು ಉಡಿ ತುಂಬಿ ಪ್ರೀತಿ ಕೊಟ್ಟಿದ್ದೀರಿ ಈ ಬಾರಿ ಮತ ಎಂಬ ಉಡಿ ತುಂಬಿ ಸಂಕಷ್ಟದಲ್ಲಿರುವ ನಮ್ಮ ಕುಟುಂಬವನ್ನು ನೀವೇ ಪಾರು ಮಾಡಬೇಕಿದೆ. ಇಡೀ ಜೀವನ ಪರ್ಯಂತ ವಿನಯ್ ಕುಲಕರ್ಣಿ ನಿಮ್ಮ ಸೇವಕರಾಗಿ ಕೆಲಸ ಮಾಡಲಿದ್ದಾರೆ ಎಂದರು.

ಕೆಪಿಸಿಸಿ ವಕ್ತಾರ ನಿಖೇತರಾಜ್ ಮೌರ್ಯ ಮಾತನಾಡಿ, ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಈ ಬಾರಿ ಇತಿಹಾಸ ಸೃಷ್ಟಿಯಾಗಲಿದೆ. ವಿನಯ್ ಅವರು ಕ್ಷೇತ್ರದ ಹೊರಗಿದ್ದರೂ 50 ಸಾವಿರ ಮತಗಳ ಅಂತರದಿಂದ ಅವರು ಗೆಲುವು ಸಾಧಿಸಲಿದ್ದಾರೆ ಎಂದರು.

ವಿನಯ್ ಕುಲಕರ್ಣಿ ಸಚಿವರಿದ್ದ ಸಮಯದಲ್ಲಿ ಯಾವುದೇ ಗುತ್ತಿಗೆದಾರನಿಂದ ಲಂಚ ಪಡೆಯಲಿಲ್ಲ. ಪ್ರಮಾಣಿಕವಾಗಿ ಗುಣಮಟ್ಟದ ಕೆಲಸಗಳನ್ನು ಮಾಡಿದರು. ಕೆರೆಯ ಹೂಳೆತ್ತೆವುದು, ಹೊಲಗಳ ರಸ್ತೆಯನ್ನು ಮಾಡಿ ಪುಣ್ಯಾತ್ಮ ಎನಿಸಿಕೊಂಡರು ವಿನಯ್ ಕುಲಕರ್ಣಿಯವರು. ಈ ಭಾಗದ ಸದ್ಯದ ಶಾಸಕರು ಬಾರೋ ಎಲ್ಲಿದ್ದೀಯಾ ಎಂದು ಸವಾಲು ಹಾಕಿದ್ದರು. ಕ್ಷೇತ್ರದ ಪ್ರತಿಯೊಬ್ಬನ ಹೃದಯದಲ್ಲೂ ವಿನಯ್ ಕುಲಕರ್ಣಿ ಇದ್ದಾರೆ ಬಂದು ನೋಡಿ ಎಂದರು.

ನ್ಯಾಯಾಲಯ ಕೊಡುವ ತೀರ್ಪು ಬೇರೆ ಮೇ.13ಕ್ಕೆ ಜನ ನೀಡುವ ತೀರ್ಪು ಈ ಕ್ಷೇತ್ರದ ಇತಿಹಾಸದಲ್ಲಿ ದಾಖಲಾಗುತ್ತದೆ. ಪ್ರತಿಯೊಬ್ಬರು ಕೂಡ ವಿನಯ್ ಕುಲಕರ್ಣಿ ಎಂದು ಕೆಲಸ ಮಾಡುತ್ತಿದ್ದಾರೆ. ವಿನಯ್ ಅವರಿಂದ ನಾನು ಯಾವುದೇ ಫಲಾಪೇಕ್ಷೆ ಬಯಸಿಲ್ಲ. ಆದರೆ, ಆ ವ್ಯಕ್ತಿಗೆ ಅನ್ಯಾಯ ಆಗಿದೆ ಎಂದು ಅವರ ಪರ ನಿಂತಿದ್ದೇನೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅರವಿಂದ ಏಗನಗೌಡರ, ಈಶ್ವರ ಶಿವಳ್ಳಿ, ವಿನಯ್ ಕುಲಕರ್ಣಿ ಅವರ ಪುತ್ರ ಹೇಮಂತ ಕುಲಕರ್ಣಿ, ಚನ್ನಬಸಪ್ಪ ಮಟ್ಟಿ ಅಶೋಕ ಸೂರ್ಯವಂಶಿ,ಮಂಜು ಭೀಮಕ್ಕನವರ,ಶ್ರೀಶೈಲ ಲಕ್ಕಮ್ಮನವರ,ಇಬ್ರಾಹಿಮ ಗುಡಸಲಮನಿ,ನಿಂಗಪ್ಪ ಮೊರಬದ,ಹಾಗೂ ಗ್ರಾಮ ಪಂಚಾಯತ ಸದಸ್ಯರು ಸೇರಿದಂತೆ ಈ ಕಾರ್ಯಕ್ರಮದಲ್ಲಿ ಸಾವಿರಾರು ಅಭಿಮಾನಿಗಳು ಕಾರ್ಯಕರ್ತರು ಪಾಲ್ಗೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button